ಪುತ್ತೂರು: ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಆಸಕ್ತಿ ಇದ್ದ ಕಾರಣ ಒಂದು ಇಲೆಕ್ಟ್ರಾಲ್ ಪೊಲಿಟಿಕಲ್ ಬೇಕು ಎಂಬ ನಿಟ್ಟಿನಲ್ಲಿ ನಾನು ಸ್ಪರ್ಧೆಗೆ ನಿಂತಿದ್ದೇನೆ ಹೊರತು ಪಕ್ಷದಿಂದ ನನಗೆ ಸೀಟು ಸಿಕ್ಕಿಲ್ಲ, ನನಗೆ ಮೋಸ ಆಗಿದೆ ಎಂಬ ನಿಟ್ಟಿನಲ್ಲಿ ಚುನಾವಣೆಗೆ ನಿಂತಿಲ್ಲ ಎಂದು ಉಡುಪಿ ಮಾಜಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈಗಾಗಲೇ ಉಡುಪಿಯಲ್ಲಿ ಮೂರು ಬಾರಿ ಶಾಸಕನಾಗಿ ಜಿಲ್ಲೆಯಲ್ಲಿ ಜನಪರ, ಸಾಮಾಜಿಕ, ಅಭಿವೃದ್ಧಿ ಕಾರ್ಯ ಎಲ್ಲರಿಗೂ ತಿಳಿದಿದು, ನನ್ನ ಸಾಧನೆ ಆಧಾರದಲ್ಲಿ ನನ್ನನ್ನು ಈ ಬಾರಿ ವಿಧಾನಪರಿಷತ್ ಚುನಾವಣೆಯಲ್ಲಿ ಗೆಲ್ಲಿಸಲಿದ್ದಾರೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಗಾಗಿ ಕಳೆದ 35 ವರ್ಷಗಳಿಂದ ದುಡಿದ ಗಿರೀಶ್ ಪಟೇಲ್ ಸೇರಿದಂತೆ ಹಲವಾರು ಕಾರ್ಯಕರ್ತರು, ಹಿರಿಯರು ಇದ್ದರೂ ಅವರನ್ನು ಬಿಟ್ಟು ಕೇವಲ ಒಂದೂವರೆ ವರ್ಷದ ಹಿಂದೆ ಪಕ್ಷಕ್ಕೆ ಸೇರ್ಪಡೆಗೊಂಡ ಧನಂಜಯ ಸರ್ಜಿ ಅವರಿಗೆ ಟಿಕೇಟ್ ನೀಡಿರುವುದು ಇಡೀ ಬಿಜೆಪಿ ಕಾರ್ಯಕರ್ತ ವಲಯದಲ್ಲಿ ಅಸಮಾಧಾನವಿದೆ. ಒಂದೊಮ್ಮೆ ಬಿಜೆಪಿಗಾಗಿ ಬೆವರು ಸುರಿಸಿದ ಹಿರಿಯರಿಗೆ ವಿಧಾನಪರಿಷತ್ ಟಿಕೇಟ್ ನೀಡಿದರೆ ನಾನು ಪಕ್ಷೇತರನಾಗಿ ಸ್ಪರ್ಧಿಸುತ್ತಿರಲಿಲ್ಲ. ಜತೆಗೆ ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೆ. ಈ ಬಾರಿ ಟಿಕೇಟ್ ನೀಡಲಾಗುವುದಿಲ್ಲ ಎಂದು ಹೈಕಮಾಂಡ್ ನನ್ನ ಬಳಿ ಸೌಜನ್ಯದಿಂದ ಹೇಳುವ ಕೆಲಸವನ್ನೂ ಮಾಡಿಲ್ಲ. ಇದನ್ನಾದರೂ ಮಾಡುತ್ತಿದ್ದರೆ ನಾನು ಚುನಾವಣೆಗೆ ನಿಲ್ಲುತ್ತಿರಲಿಲ್ಲ ಎಂದು ತಮ್ಮ ನೋವನ್ನು ಹಂಚಿಕೊಂಡರು.
ಬಿಜೆಪಿಯಲ್ಲಿನ ಹಿಂದಿನ ಸಂಸ್ಕೃತಿ ನಶಿಸಿ ಹೋಗುತ್ತಿರುವುದರಿಂದ ಬಿಜೆಪಿಯಲ್ಲಿ ಇತ್ತೀಚಿನ ದಿನಗಳಲ್ಲಿ ಬಂಡಾಯ ಏಳುತ್ತಿರುವುದಕ್ಕೆ, ನೈಜ ಕಾರ್ಯಕರ್ತರಿಗೆ ಅನ್ಯಾಯವಾಗಲು ಕಾರಣವಾಗಿದೆ. ಇದೀಗ ವಿಧಾನಪರಿಷತ್ ಚುನಾವಣೆ ಸಂದರ್ಭದಲ್ಲಿ ಇದಾಗಿದ್ದು, ಇದು ಬಿಜೆಪಿ ಶುದ್ಧೀಕರಣದ ಒಂದು ಭಾಗವಾಗಿದೆ ಎಂದು ತಿಳಿಸಿದರು.
ಇದೀಗ ಪುತ್ತೂರಿಗೆ ಬಂದಿದ್ದು, ಕ್ಷೇತ್ರದಾದ್ಯಂತ ಪದವೀಧರ ಕ್ಷೇತ್ರಗಳಾದ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಮತ ಯಾಚಿಸಲಿದ್ದೇನೆ. ಹಿಂದೆ ನಾನು ಶಾಸಕನಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯದಿಂದಾಗಿ ಇಂದು ಬೆಳಗ್ಗೆಯಿಂದ ಪುತ್ತೂರಿನ ಜನತೆಯಿಂದ ಒಳ್ಳೆಯ ಪ್ರತಿಕ್ರಿಯೆ ಬಂದಿದೆ ಎಂದು ತಿಳಿಸಿದರು. ಈಗಾಗಲೇ ಐದೂವರೆ ಜಿಲ್ಲೆಗಳಿಗೆ ಪ್ರವಾಸ ಮಾಡಿದ್ದೇನೆ. ಕಾರ್ಯಕರ್ತರ ತಂಡ ಮತದಾರರನ್ನು ಸಂಪರ್ಕಿಸಿ ಮತ ಯಾಚಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನವೀನ್ ಚಂದ್ರ ಕೆ., ರಾಜಾರಾಮ ಭಟ್, ನವೀನ್ ಕುಲಾಲ್, ಸಂತೋಷ್ ರಾವ್, ಸುವರ್ತನ್ ನಾಯಕ್ ಉಪಸ್ಥಿತರಿದ್ದರು.