ಯಕ್ಷಗಾನ ಅಭ್ಯಾಸ ಕೇಂದ್ರ ದುಬೈ ಯು ಎ ಇ ಪ್ರಸ್ತುತಪಡಿಸಿದ “ದುಬೈ ಯಕ್ಷೋತ್ಸವ 2024- ದಾಶರಥಿ ದರ್ಶನ” ಯಕ್ಷಗಾನ ಪ್ರದರ್ಶನ ಮತ್ತು “ಯಕ್ಷ ಶ್ರೀ ರಕ್ಷಾ ಗೌರವ 2024” ಪ್ರಶಸ್ತಿ ಪ್ರದಾನ ಸಮಾರಂಭ ಜೂನ್ 09ರ ಆದಿತ್ಯವಾರ ದುಬೈಯ ಶೇಖ್ ರಶೀದ್ ಅಡಿಟೋರಿಯಂನಲ್ಲಿ ಸಂಪನ್ನಗೊಂಡಿತು.
ಶ್ರೀ ರಾಮಾಯಣ ಕಥಾ ಆಧಾರಿತ “ದಾಶರಥಿ ದರ್ಶನ” ಯಕ್ಷಗಾನ ಪ್ರದರ್ಶನ ಅಪಾರ ಜನಮೆಚ್ಚುಗೆಗೆ ಪಾತ್ರವಾಗಿ- ಮುಖತಃ ನೋಡಿದ ಹಾಗೂ ಜಾಲತಾಣಗಳ ಮೂಲಕವಾಗಿ ನೋಡಿದ ದೇಶ ವಿದೇಶದ ಕಲಾಭಿಮಾನಿಗಳ ಮುಕ್ತ ಕಂಠದ ಪ್ರಶಂಸೆಗೆ ಪಾತ್ರವಾಗಿ ಮಾದರಿ ದುಬೈ ಯಕ್ಷಗಾನ ಪ್ರದರ್ಶನದ ತನ್ನದೇ ದಾಖಲೆಯನ್ನು ಮತ್ತೆ ತಿದ್ದಿ ಬರೆಯುವಂತೆ ಮಾಡಿತು.
ಧಾರ್ಮಿಕ ಮತ್ತು ಸಾಂಪ್ರದಾಯಿಕ ರೀತಿಯ ವೈಭವದ ಶುಭಾರಂಭ ಶ್ರೀ ರಾಮರಕ್ಷಾ ಸ್ತೋತ್ರ ಪಠಣ, ಭಜನೆ ಮತ್ತು ಚೌಕಿ ಪೂಜೆಯಿಂದ ಆರಂಭಗೊಂಡ ಕಾರ್ಯಕ್ರಮ ಪೂರ್ವರಂಗ ಪ್ರದರ್ಶನದ ಮೂಲಕ ರಂಗಚಾಲನೆ ಪಡೆಯಿತು. ಪೂರ್ವರಂಗದಲ್ಲಿ ಕಾಣಿಸಿಕೊಂಡ ಯಕ್ಷಗಾನದ ಪ್ರಾಚೀನ ಪರಂಪರೆಯ ಗಣಪತಿ ಕೌತುಕ ಸರ್ವರ ಮೆಚ್ಚುಗೆಗೆ ಪಾತ್ರವಾಯಿತು. ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ, ಮತ್ತು ಯಕ್ಷ ಧ್ರುವ ಪಟ್ಲ ಫೌಂಡೇಶನ್ ಇದರ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ ಶೆಟ್ಟಿ, ಸಂಚಾಲಕರೂ ಗೌರವಾಧ್ಯಕ್ಷರಾದ ಶ್ರೀಯುತ ಶಶಿಧರ ಶೆಟ್ಟಿ ಬರೋಡ, ಮತ್ತು ದುಬೈ ಯು ಎ ಇ ಘಟಕಗಳ ಸದಸ್ಯರುಗಳ ಸಹಿತ ಎಲ್ಲ ಗಣ್ಯಾತಿಗಣ್ಯರನ್ನು ವೈಭವದ ಪೂರ್ಣಕುಂಭ ಕಲಶದಿಂದ ಸ್ವಾಗತಿಸಲಾಯಿತು. ಗಣ್ಯರು ಮತ್ತು ಸುಮಂಗಲೆಯರು ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ದೀಪ ಪ್ರಜಲ್ವನೆ ಮಾಡುವ ಮೂಲಕ ಶುಭಾರಂಭ ಒದಗಿಸಿದರು.
ಯಕ್ಷಶ್ರೀ ರಕ್ಷಾ ಗೌರವ ವಾರ್ಷಿಕ ವಿಶೇಷ ಪ್ರಶಸ್ತಿ -2024
ಪ್ರಸಂಗ ಪ್ರದರ್ಶನದ ಮಧ್ಯಾವಧಿಯಲ್ಲಿ, ದುಬಾಯಿ ಯಕ್ಷಗಾನ ಅಭ್ಯಾಸ ತರಗತಿ (YAKU) ಪ್ರಾಯೋಜಕತ್ವದಲ್ಲಿ ದುಬಾಯಿ ಅಥವಾ ತಾಯಿನಾಡಿನ ಯಕ್ಷಗಾನ ರಂಗದ ಸಾಧಕರೊಬ್ಬರನ್ನು ಗುರುತಿಸಿ, ವಿಶೇಷವಾಗಿ ವಾರ್ಷಿಕ ಯಕ್ಷಶ್ರೀ ರಕ್ಷಾ ಗೌರವ ಪ್ರಶಸ್ತಿ ನೀಡಲು ಉದ್ದೇಶಿಸಿದಂತೆ, 2023-2024 ನೇ ಸಾಲಿನ ಪ್ರಶಸ್ತಿಗೆ, ಸ್ಥಳೀಯ ಯಕ್ಷಗಾನ ಹಿಮ್ಮೇಳ ಕಲಾವಿದರೂ, ನಮ್ಮ ಯಕ್ಷಗಾನ ಅಭ್ಯಾಸ ಕೇಂದ್ರದ ಹಿರಿಯ ಸದಸ್ಯರೂ ಆದ ವೆಂಕಟೇಶ ಶಾಸ್ತ್ರಿ ಪುತ್ತಿಗೆಯವರಿಗೆ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ವಿಶೇಷ ಅಭ್ಯಾಗತರಾದ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸಂಚಾಲಕರು , ದಾನಿಗಳೂ ಆದ ಶಶಿಧರ್ ಶೆಟ್ಟಿ ಬರೋಡ, ಪ್ರಮುಖ ಪ್ರಾಯೋಜಕತ್ವದ ಮೂಲಕ ಪ್ರೋತ್ಸಾಹಿಸಿದ ಸಂಸ್ಥೆ ಭೀಮ ಜ್ಯುವೆಲ್ಲರಿಯ ನಾಗರಾಜ ರಾವ್, ಅಲ್ ಫರ್ದಾನ್ ಎಕ್ಸ್ಚೇಂಜ್ ನ ಅಧಿಕಾರಿಗಳು, ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ದುಬಾಯಿಯ ಗಣ್ಯಾತಿಗಣ್ಯರ ನೆಲೆಯಲ್ಲಿ ಸರ್ವೋತ್ತಮ ಶೆಟ್ಟಿ, ಪುತ್ತಿಗೆ ವಾಸುದೇವ ಭಟ್, ಸತೀಶ್ ಪೂಜಾರಿ , ಹರೀಶ್ ಶೇರಿಗಾರ್, ಹರೀಶ್ ಬಂಗೇರ , ರಮಾನಂದ್ ಶೆಟ್ಟಿ , ಸಂದೀಪ್ ರೈ ನಂಜೆ, ದಿವಾಕರ ಶೆಟ್ಟಿ, ಆತ್ಮಾನಂದ ರೈ , ಸುಧಾಕರ್ ರಾವ್ ಪೇಜಾವರ , ಗುಣಶೀಲ ಶೆಟ್ಟಿ, ಜಯರಾಮ್ ರೈ, ಸುಂದರ್ ಶೆಟ್ಟಿ , ವಿಶೇಷ ಅತಿಥಿಯಾಗಿ ಪರಿಸರ ಪ್ರೇಮಿ ಆರ್ . ಕೆ ನಾಯರ್ ಉಪಸ್ಥಿತರಿದ್ದರು.
ಸಮತೂಕದ ಸ್ಪರ್ಧಾತ್ಮಕ ಯಕ್ಷಾಭಿನಯ – ನೃತ್ಯಗಳ ಮೇಲಾಟ
ಯಕ್ಷಗಾನ ಅಭ್ಯಾಸ ಕೇಂದ್ರ, ಯುಎಇಯ ಬಾಲ- ಯುವ- ಪರಿಣತ -ಪ್ರೌಢ ಕಲಾವಿದರ ಸಹಿತ ಅಪಾರ ಜನಮನ್ನಣೆ – ಯುವಜನಾಂಗದ ಆಕರ್ಷಣೆಯ ಕೇಂದ್ರಬಿಂದು ಎನಿಸಿದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಸಿರಿಕಂಠದ ಗಾನಸಾರಥ್ಯ, ಮಹಿಳಾ ಭಾಗವತರಲ್ಲಿ ಅಗ್ರಶ್ರೇಣಿಯಲ್ಲಿರುವ ಭವ್ಯಶ್ರೀ ಹರೀಶ್ ಕುಲ್ಕುಂದರವರ ಗಾನಸುಧೆ, ಜೊತೆಗೆ ತಂಡದ ಯುವ ಭಾಗವತ ಕೃಷ್ಣ ಪ್ರಸಾದ್ ರಾವ್ ಸುರತ್ಕಲ್, ಯುವ ಪ್ರಖ್ಯಾತ ಮದ್ದಳೆಗಾರರಾದ ಮಯೂರ ನಾಯ್ಗ, ಸವಿನಯ ನೆಲ್ಲಿತೀರ್ಥರ ಸಾಂಗತ್ಯದೊಂದಿಗೆ ಅಭೂತಪೂರ್ವ ಪ್ರದರ್ಶನಕ್ಕೆ ನಾಂದಿಯಾಯಿತು. ಭವ್ಯಶ್ರೀಯವರ ಪುತ್ರ ಅಗಸ್ತ್ಯ ಕುಲ್ಕುಂದ ಚಕ್ರತಾಳದಲ್ಲಿ ಸಹಕರಿಸಿ, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.
ಅಲ್ಲದೆ ಆಕರ್ಷಕ ವರ್ಣ – ವಸ್ತ್ರಾಲಂಕಾರ, ಝಗಮಗಿಸುವ ವೇಷಭೂಷಣಗಳೊಂದಿಗೆ ಪ್ರಸಾಧನ ಕಲೆಯಲ್ಲಿ ಸಿದ್ಧಹಸ್ತರಾದ, ಕಿನ್ನಿಗೋಳಿ ಮೋಹಿನೀ ಕಲಾ ಸಂಪದದ ಕಲಾವಿದರಾದ ಗಂಗಾಧರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ನಿತಿನ್ ಕುಂಪಲ, ಮನೋಜ್ ಶೆಟ್ಟಿಗಾರ್ ಹಳೆಯಂಗಡಿ ಮೊದಲಾದವರು ತಮ್ಮ ವರ್ಣ-ವಸ್ತ್ರಾಲಂಕಾರದ ಮೂಲಕ ಮನಸೂರೆಗೊಂಡರು.
ದಾಶರಥಿ ದರ್ಶನ ಯಕ್ಷಗಾನ ಪ್ರದರ್ಶನವು “ಯಕ್ಷಮಯೂರ”, “ದ.ರಾ. ಬೇಂದ್ರೆ ಪ್ರಶಸ್ತಿ” ಪುರಸ್ಕೃತ ದುಬಾಯಿಯ ಯಕ್ಷಗುರು ಶೇಖರ್ ಡಿ. ಶೆಟ್ಟಿಗಾರರ ದಕ್ಷ ನಿರ್ದೇಶನ ಜೊತೆಗೆ ಯುವ ಕಲಾವಿದ ಕೇಂದ್ರದ ನಾಟ್ಯಗುರು ಶರತ್ ಕುಡ್ಲರ ಸಹನಿರ್ದೇಶನದಲ್ಲಿ –ದುಬಾಯಿ ಯಕ್ಷಗಾನ ಅಭ್ಯಾಸ ಕೇಂದ್ರದ ಕಲಾವಿದರಿಂದ ಪ್ರದರ್ಶಿಸಲ್ಪಟ್ಟು, ನೆರೆದ ಯಕ್ಷಪ್ರೇಮಿಗಳ ಮುಕ್ತಕಂಠದ ಪ್ರಶಂಸೆಗೆ ಪಾತ್ರವಾಯಿತು, ಮಾತ್ರವಲ್ಲದೆ ದೇಶ ವಿದೇಶದ ಯಕ್ಷಾಭಿಮಾನಿಗಳ ಶ್ಲಾಘನೆಗೂ ಪಾತ್ರವಾಯಿತು.
ವಿಶೇಷವಾಗಿ ವೇದಿಕೆಯಲ್ಲಿ ಕಾಣಿಸಿಕೊಂಡ ಪಾತ್ರಗಳ ಸಂಖ್ಯೆ ಸರಿಯಾಗಿ ಒಟ್ಟು 127 . ಕೈಲಾಸ, ವೈಕುಂಠ, ಸತ್ಯಲೋಕ ಹೀಗೆ ಒಮ್ಮೆಲೇ ಮೂರು ರಂಗಸ್ಥಳಗಳಲ್ಲಿ ಪ್ರಸಂಗಾರಂಭ, ಮತ್ತು ಮುಕ್ತಾಯಕ್ಕೆ ಮತ್ತೆ ಕೈಲಾಸ -ವೈಕುಂಠ ದರ್ಶನ, ಒಟ್ಟು 7 ಜೋಡಿ ರಾಮ-ಲಕ್ಷ್ಮಣರಿಂದ ಭಿನ್ನ ಭಿನ್ನ ಆಯಾಮದ ಕಲಾ ಪ್ರಸ್ತುತಿ. ವಿಶೇಷ ದೃಶ್ಯ ಸಂಯೋಜನೆ – ನಾಟ್ಯ ಸಂಯೋಜನೆಗಳ ಮೂಲಕ ಮೂಡಿಬಂದ ಸೇತುಬಂಧನದ ದೃಶ್ಯ ವೈಭವ, ನೂತನ ಕಥಾನಿರೂಪಣಾ ವಿಧಾನ, ತಂಡ ನೃತ್ಯ ವಿಧಾನಗಳಿಂದ ರಾಮಾಯಣದ ಮುಖ್ಯ ಕಥಾ ಖಂಡಗಳನ್ನು ಜೋಡಿಸಿ- ಆದಿಯಿಂದ ಅಂತ್ಯದವರೆಗೆ ನೈಯ್ದ ಬಗೆ, ಏಕಕಾಲದಲ್ಲಿ ಹತ್ತು ಹಲವು ವೇಷವೈಭವದಿಂದ ತುಂಬಿ ನಿಂತ ರಂಗಸ್ಥಳ. ವೈವಿಧ್ಯಮಯ ವೇಷಭೂಷಣ, ನಾಟ್ಯಗಳ ಸಮ್ಮಿಲನ. ನೃತ್ಯನಾಟಕವೆಂಬ ನೂತನ ಪರಿಕಲ್ಪನೆಯಲ್ಲಿ ಅಲ್ಲಲ್ಲಿ ಚುಟುಕಾಗಿ ಸಾಗುವ ಕಥಾಗುಚ್ಛಗಳ ಪ್ರಸ್ತುತಿ ನೋಡುಗರನ್ನು ನಿಜಕ್ಕೂ ವಿಸ್ಮಯಗೊಳಿಸಿತು . ಪುಟ್ಟ ಮಕ್ಕಳು- ಹಿರಿಯರೊಡನೆ ಸ್ಪರ್ಧೆಗೆ ಇಳಿದವರಂತೆ ರಂಗದಲ್ಲಿ ವಿಜೃಂಭಿಸಿ ಪ್ರಸಂಗ ಕಳೆಕಟ್ಟುವಂತೆ ಮಾಡಿದರು. ಮಾತ್ರವಲ್ಲದೆ ಯಕ್ಷಾಭಿಮಾನಿಗಳ ವಿಶೇಷ ಮೆಚ್ಚುಗೆಗೆ ಪಾತ್ರರಾದರು. ಕರಾವಳಿ ಪ್ರದೇಶದ ಅವಿಭಜಿತ ದಕ್ಷಿಣಕನ್ನಡ-ಉತ್ತರಕನ್ನಡದ ಮಂದಿ, ಬೆಂಗಳೂರಿಗರು, ಮುಂಬಾಯಿ ಮಾತ್ರವಲ್ಲದೆ ವಿದೇಶಗಳ ಕಲಾಪ್ರೇಮಿಗಳು ತಮ್ಮ ಸಂದೇಶ, ಕರೆಗಳಿಂದ ಕಾರ್ಯಕ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.ಒಟ್ಟಿನಲ್ಲಿ ದಾಶರಥಿ ದರ್ಶನ ಯಕ್ಷಗಾನ ಪ್ರದರ್ಶನ ದುಬಾಯಿಯ ಯಕ್ಷಗಾನ ಚರಿತ್ರೆಯಲ್ಲಿ ಒಂದು ನೂತನ ದಾಖಲೆಯನ್ನು ನಿರ್ಮಿಸಿತು.
ಮಾದರಿ ಸಂಘಟನೆಯ ಬೆನ್ನೆಲುಬಾಗಿ ನಿಂತ ಮಾದರಿ ಕಾರ್ಯಕರ್ತರ ಪಡೆ
ಸ್ವಾಗತ ದ್ವಾರ, ದೇವರ ಮಂಟಪ, ವಿಶೇಷ ದೃಶ್ಯ ಸಂಯೋಜನೆ, ರಂಗಸ್ಥಳ, ಚೌಕಿ, ವೇಷಭೂಷಣ ಪರಿಕರಗಳ ಸಂಯೋಜನೆ, ಅತಿಥಿಗಳ ಸ್ವಾಗತ, ಸಭಾ ಕಾರ್ಯಕ್ರಮಗಳ ನಿರ್ವಹಣೆ, ಫ್ರಥಮ ಚಿಕಿತ್ಸಾ ಘಟಕ, ವಿಶೇಷವಾಗಿ ಮುದ್ರಣ, ಮಾಧ್ಯಮಗಳಲ್ಲಿ ನಿರಂತರ ಪ್ರಚಾರಕ್ಕಾಗಿ ಬಹುಸಂಖ್ಯೆಯ ಕಾರ್ಯಕರ್ತರು ಟೊಂಕಕಟ್ಟಿ, ಶಿಸ್ತಿನಿಂದ ದುಡಿದ ಕಾರ್ಯಕರ್ತರ ಪರಿಶ್ರಮ ಈ ಯಶಸ್ವಿ ಸಮಾರಂಭದ ಮೂಲದ್ರವ್ಯ ಎನ್ನುವುದನ್ನು ಯಾವತ್ತೂ ಮರೆಯುವಂತಿಲ್ಲ. ಈ ತಂಡಗಳ ಸರ್ವಸದಸ್ಯರು ಎಲ್ಲರ ಅಭಿನಂದನೆಗೆ ಪಾತ್ರರಾಗಿದ್ದಾರೆ. ತಮ್ಮ ಮಾದರಿ ನಾಯಕತ್ವದ ಮೂಲಕ ದುಬಾಯಿಯ ಯಕ್ಷಗಾನ ಅಭ್ಯಾಸ ಕೇಂದ್ರದನ್ನು ಮುನ್ನಡೆಸುತ್ತಿರುವ – ಕಾರ್ಯಕ್ರಮವನ್ನು ಸಂಘಟಿಸಿದ ಯಕ್ಷಗಾನ ಅಭ್ಯಾಸ ಕೇಂದ್ರ ದುಬೈ ಯು ಎ ಇ ಸಂಚಾಲಕರಾದ ಕೊಟ್ಟಿಂಜ ದಿನೇಶ ಶೆಟ್ಟಿಯವರ ಪರಿಶ್ರಮ ಬಹುಜನ ವಂದನೀಯವೆನಿಸಿತು.
ಕಾರ್ಯಕ್ರಮವನ್ನು ರಾಜೇಶ್ ಕುತ್ತಾರು ನಿರ್ವಹಿಸಿದರೆ, ಕೇಂದ್ರದ ಸಂಚಾಲಕ ದಿನೇಶ ಶೆಟ್ಟಿ ಕೊಟ್ಟಿಂಜ ವಂದಿಸಿದರು.