ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬಾತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್ ಸೇರಿ 10ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ತಿಳಿಸಿದ್ದಾರೆ.
ಬೆಸ್ಕಾಂ ನಿವೃತ್ತ ನೌಕರನ ಮಗನಾಗಿರುವ ರೇಣುಕಾ ಸ್ವಾಮಿ ಅಪೋಲೋ ಮೆಡಿಕಲ್ ನಲ್ಲಿ ಕೆಲಸ ಮಾಡುತ್ತಿದ್ದ. ಈತ ಕೂಡ ನಟ ದರ್ಶನ್ ಅಭಿಮಾನಿ. ಈತನ ಕೊಲೆ ಪ್ರಕಪಣಕ್ಕೆ ಸಂಬಂಧಿಸಿ ಚಿತ್ರದುರ್ಗದ ದರ್ಶನ್ ಅಭಿಮಾನಿ ಸಂಘದ ರಾಘವೇಂದ್ರ, ವಿನಯ್ ಎಂಬುವವರನ್ನು ಸಹ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಕಾಮಾಕ್ಷಿಪಾಳ್ಯದ ಸತ್ವ ಅಪಾರ್ಟ್ ಮೆಂಟ್ ಬಳಿಯ ಮೋರಿಯಲ್ಲಿ ಶವ ತೇಲಾಡುತ್ತಿದ್ದುದು ನಾಯಿಗಳು ಕಚ್ಚಿ ಎಳೆದು ತಂದಾಗ 30ರಿಂದ 35 ವರ್ಷದ ಯುವಕನ ಶವ ಎಂದು ಗೊತ್ತಾಗಿದೆ. ತಮ್ಮ ಮಗ ಕಳೆದ ಶನಿವಾರದಿಂದ ಕಾಣಿಸುತ್ತಿಲ್ಲ, ನಾಪತ್ತೆಯಾಗಿದ್ದಾನೆ ಎಂದು ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದಾಗ ಪ್ರಕರಣದ ಜಾಡು ಹಿಡಿದು ತನಿಖೆ ಮಾಡುತ್ತಾ ಹೋದಾಗ ಬೆಳಕಿಗೆ ಬಂತು ಎಂದಿದ್ದಾರೆ.
ನಟ ದರ್ಶನ್ ಸೇರಿ 10ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದಾರೆ.
ಹಿನ್ನಲೆ: ಜೂನ್ 9 ರಂದು ಭಾನುವಾರದಂದು ಕಾಮಾಕ್ಷಿಪಾಳ್ಯದಲ್ಲಿ ಅಪರಿಚಿತ ಶವವೊಂದು ಸಿಕ್ಕಿತ್ತು. ಆತನ ದೇಹದ ಮೇಲೆ ಇದ್ದ ಗಾಯಗಳನ್ನು ಗಮನಿಸಿ ಕಾಮಾಕ್ಷಿಪಾಳ್ಯದ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದೆವು. ಅದಾದ ಬಳಿಕ ಸಿಸಿಟಿವಿ ಹಾಗೂ ಇತರೆ ತಾಂತ್ರಿಕ ಆಧಾರದ ಮೇಲೆ ವ್ಯಕ್ತಿಯ ಗುರುತು ಪರಿಚಯ ಗೊತ್ತಾಗಿದ್ದು, ಆತ ಚಿತ್ರದುರ್ಗದ ವಾಸಿ ರೇಣುಕಾ ಸ್ವಾಮಿ ಎಂದು ತಿಳಿದುಬಂತು.
ತನಿಖೆಯಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟನ ಪಾತ್ರವಿದೆ ಎಂದು ಗೊತ್ತಾಗಿ ನಟ ಹಾಗೂ ಆತನ ಸಹಚರರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ರೇಣುಕಾ ಸ್ವಾಮಿ ದರ್ಶನ್ ಪತ್ನಿಗೆ ಅವಾಚ್ಯ ಸಂದೇಶಗಳನ್ನು ಕಳಿಸಿದ್ದಾನೆ ಎಂಬ ಕಾರಣಕ್ಕೆ ಆತನ ಕೊಲೆ ಮಾಡಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ’ ಎಂದಿದ್ದಾರೆ ಆಯುಕ್ತ ದಯಾನಂದ್.
ತನಿಖೆಯ ಆರಂಭಿಕ ಹಂತದಲ್ಲಿ ಇರುವ ಕಾರಣ ಪ್ರಕರಣದ ಬಗೆಗೆ ಈಗ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದರು.
ನಟಿ ಪವಿತ್ರಾ ಗೌಡ ವಶಕ್ಕೆ: ಘಟನೆಗೆ ಸಂಬಂಧಿಸಿ ನಟಿ ಪವಿತ್ರಾ ಗೌಡರನ್ನು ಸಹ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.