ಭಾರೀ ಮಳೆಯಾಗುತ್ತಿರುವುದರಿಂದ ಬೆಂಗಳೂರನ್ನು ಸಂಪರ್ಕಿಸುವ ಘಾಟಿ ಪ್ರದೇಶಗಳಲ್ಲಿ ಸಂಚಾರಕ್ಕೆ ತೊಡಕು ಆಗಿರುವ ಹಿನ್ನೆಲೆಯಲ್ಲಿ ರೈಲ್ವೇ ಸಚಿವಾಲಯವು ಮತ್ತೊಂದು ವಿಶೇಷ ರೈಲು ಸಂಚಾರಕ್ಕೆ ಮುಂದಾಗಿದೆ.
ಈ ರೈಲು ಜು. 26 ಹಾಗೂ ಜು. 28ರಂದು ಬೆಂಗಳೂರಿನಿಂದ ಪಡೀಲು ಬೈಪಾಸ್ ಮಾರ್ಗವಾಗಿ ಕುಂದಾಪುರ, ಕಾರವಾರದವರೆಗೆ ಸಂಚರಿಸಲಿದೆ. ಬಳಿಕ ಬೆಂಗಳೂರಿಗೆ ಮರಳಲಿದೆ.
ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ವಾರಾಂತ್ಯದ ವಿಶೇಷ ರೈಲಿಗಾಗಿ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದರು. ಅದಕ್ಕೆ ಸಚಿವರು ತುರ್ತು ಸ್ಪಂದಿಸಿ ವಿಶೇಷ ರೈಲು ಸಂಚಾರದ ವ್ಯವಸ್ಥೆ ಮಾಡಿದ್ದಾರೆ. ಇಂಥದ್ದೊಂದು ರೈಲಿನ ಅಗತ್ಯದ ಬಗ್ಗೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣ ಸಮಿತಿ ಸಂಸದರಿಗೆ ಮನವಿ ಸಲ್ಲಿಸಿತ್ತು.
ಈ ರೈಲು ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ನಿಲ್ದಾಣದಿಂದ ಜು.26ರ ಮಧ್ಯರಾತ್ರಿ 12.30ಕ್ಕೆ ಹೊರಟು ಜು.27ರ ಬೆಳಗ್ಗೆ 11.30ಕ್ಕೆ ಉಡುಪಿ, 12.15ಕ್ಕೆ ಕುಂದಾಪುರ ಹಾಗೂ ಸಂಜೆ 4ಕ್ಕೆ ಕಾರವಾರ ತಲುಪಲಿದೆ. ಜು. 27ರಂದು ರಾತ್ರಿ 11.30ಕ್ಕೆ ಕಾರವಾರದಿಂದ ಹೊರಟು ಕುಂದಾಪುರ, ಉಡುಪಿ ಮಾರ್ಗವಾಗಿ ಪಡೀಲ್ ಬೈಪಾಸ್ ಮೂಲಕ ಜು.28ರ ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಸರ್.ಎಂ.ವಿಶ್ವೇಶ್ವರಯ್ಯ ನಿಲ್ದಾಣ ತಲುಪಲಿದೆ.
ಜು.28ರ ಮಧ್ಯರಾತ್ರಿ 2.30ಕ್ಕೆ ಮತ್ತೆ ಬೆಂಗಳೂರಿನಿಂದ ಕಾರವಾರಕ್ಕೆ ಹೊರಡಲಿದೆ.