ಬೆಂಗಳೂರು: ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳು, ಕ್ಲಿನಿಕ್ಗಳು, ಪ್ರಯೋಗಾಲಯಗಳು ಹಾಗೂ ನಕಲಿ ವೈದ್ಯರ ಪತ್ತೆ ಕಾರ್ಯ ಚುರುಕುಗೊಳಿಸಿರುವ ಆರೋಗ್ಯ ಇಲಾಖೆ, ರಾಜ್ಯದ ವಿವಿಧೆಡೆ ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿದ್ದ 1,093 ಕ್ಲಿನಿಕ್ಗಳಿಗೆ ಬೀಗ ಹಾಕಿಸಿದೆ.
ಪರವಾನಗಿ ಇಲ್ಲದೆ, ನೋಂದಣಿ ಮಾಡದೆ ಹಾಗೂ ಅರ್ಹ ವಿದ್ಯಾರ್ಹತೆ ಇಲ್ಲದೆ ಕ್ಲಿನಿಕ್ಗಳನ್ನು ನಡೆಸುತ್ತಿರುವ ಬಗ್ಗೆಯೂ ಇಲಾಖೆಗೆ ದೂರುಗಳು ಸಲ್ಲಿಕೆಯಾಗಿದ್ದವು. ಕಳೆದ ವರ್ಷಾಂತ್ಯಕ್ಕೆ ನಕಲಿ ಕ್ಲಿನಿಕ್ಗಳ ಪತ್ತೆ ಕಾರ್ಯ ಚುರುಕುಗೊಳಿಸಲಾಗಿದ್ದು, 1,775 ನಕಲಿ ವೈದ್ಯರನ್ನು ಪತ್ತೆ ಮಾಡಲಾಗಿದೆ.
ಪತ್ತೆಯಾಗಿರುವ ನಕಲಿ ಕ್ಲಿನಿಕ್ಗಳಲ್ಲಿ ಹೆಚ್ಚಿನವು ಉತ್ತರ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಲಿನಿಕ್ಗಳಾಗಿವೆ. ಪತ್ತೆ ಮಾಡಲಾದ ನಕಲಿ ಕ್ಲಿನಿಕ್ಗಳಲ್ಲಿ 54 ಕ್ಲಿನಿಕ್ಗಳನ್ನು ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ. 24 ನಕಲಿ ಕ್ಲಿನಿಕ್ಗಳ ವೈದ್ಯರಿಗೆ ದಂಡ ವಿಧಿಸಲಾಗಿದೆ. ನಕಲಿ ಕ್ಲಿನಿಕ್ಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ 143 ಪ್ರಕರಣಗಳು ದಾಖಲಾಗಿವೆ.