ಪುತ್ತೂರು: ನಿರುದ್ಯೋಗ, ಬೆಲೆ ಏರಿಕೆ, ಭ್ರಷ್ಟಾಚಾರ, ಹಿಂಸಾಚಾರ, ಸರ್ವಾಧಿಕಾರ ಆಡಳಿತ ನೀಡಿದ ಕೇಂದ್ರ ಸರಕಾರ ಇದೀಗ ಮೋದಿ 3 ನೇ ಆಡಳಿತದಲ್ಲಿ ಬಾಲಂಗೋಚಿ ಸರಕಾರವಾಗಿ ಮೂಡಿ ಬಂದಿದೆ. ಹಗರಣಗಳ ಮೂಟೆಯನ್ನೇ ನೀಡಿದ 1 ಹಾಗೂ 2ನೇ ಅವಧಿಯಂತೆ 3ನೇ ಅವಧಿಯಲ್ಲಿ ಆಗದೇ, ಜನ ಕಲ್ಯಾಣದತ್ತ ಗಮನ ಹರಿಸುವ ಅಗತ್ಯವಿದೆ ಎಂದು ಕೆ. ಪಿ. ಸಿ. ಸಿ. ವಕ್ತಾರ ಅಮಳ ರಾಮಚಂದ್ರ ಹೇಳಿದರು.
ಶುಕ್ರವಾರ ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಮೋದಿ 2 ಸರಕಾರ 3ನೇ ಅವಧಿಗೆ ಹಗರಣಗಳ ಮೂಟೆಯನ್ನೇ ತನ್ನ ಜೊತೆಗೆ ಹೊತ್ತು ತಂದಿದೆ. ಇಲೆಕ್ಟೋರಲ್ ಬಾಂಡ್ ಹಗರಣವನ್ನು ಕಟ್ಟಿಕೊಂಡೇ ಚುನಾವಣೆಗೆ ಧುಮುಕಿದ ಮೋದಿ 2 ಸರಕಾರ , 2 ಮತ್ತು 3 ಸರಕಾರಗಳ ಮದ್ಯೆ ಎಕ್ಸಿಟ್ ಪೋಲ್ ಹಗರಣವನ್ನು ಬೆನ್ನಿಗಿಟ್ಟುಕೊಂಡು ಜನಸಾಮಾನ್ತರ ಕಿಸೆಗೆ ಕನ್ನ ಹಾಕಿತ್ತು. ಈ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಬರುವುದಿಲ್ಲವೆಂಬ ಸತ್ಯದ ಅರಿವಿದ್ದರೂ ಸಮೀಕ್ಷಾ ಏಜೆನ್ಸಿಗಳನ್ನು ಖರೀದಿಸಿ, ತಮಗೆ ಬೇಕಾದಂತೆ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ರೂಪಿಸಿ, ತಮ್ಮ ಮೈತ್ರಿಕೂಟ 400ಕ್ಕೂ ಅಧಿಕ ಸ್ಥಾನಗಳನ್ನು ಪಡೆಯುತ್ತದೆ ಎಂದು ಶೇರು ಹೂಡಿಕೆದಾರರನ್ನು ನಂಬಿಸಿ 12.48 ಲಕ್ಷ ಕೋಟಿ ರೂ.ಗೂ ಅಧಿಕ ರೂಪಾಯಿಗಳನ್ನು ಕೊಳ್ಳೆ ಹೊಡೆಯಲಾಯಿತು. 3೦ ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ಹಣ ದೇಶದ ಜನಸಾಮಾನ್ಯ ಹೂಡಿಕೆದಾರರು ಕಳೆದುಕೊಳ್ಳುವಂತಾಯಿತು. ಜೂನ್ 4ರ ನಂತರ ಶೇರು ಮಾರುಕಟ್ಟೆ ಏರಿಯಾಗಲಿವೆ, ಕೊಳ್ಳುವವರು ಈಗಲೇ ಕೊಂಡುಕೊಳ್ಳಿ ಎಂದು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ಜನರನ್ನು ಪ್ರೇರೇಪಿಸಿ ಈ ವ್ಯವಸ್ಥಿತ ಲೂಟಿಯನ್ನು ನಡೆಸಲಾಯಿತು. ಚುನಾವಣಾ ಫಲಿತಾಂಶ ಹೊರ ಬಂದು ಮೋದಿ 3 ಸರಕಾರ ಅಧಿಕಾರಕ್ಕೆ ಏರುವ ಹೊತ್ತಿನಲ್ಲೇ ನೀಟ್ ಪರೀಕ್ಷಾ ಫಲಿತಾಂಶವೂ ಹೊರಬಿದ್ದು ಮತ್ತೊಂದು , ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಬಯಲಾಯಿತು. ಹೀಗೆ ಬಿಜೆಪಿ ಸರಕಾರ ಎಂದರೆ ಅದು ಹಗರಣಗಳ ಮೂಟೆ ಎಂಬುದು ಜಗಜ್ಜಾಹೀರಾಯಿತು ಎಂದು ಆರೋಪಿಸಿದರು.
ಲೀಕ್ಗಳ ಸರ್ಕಾರ :
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಲೀಕ್ಗಳ ಸರಕಾರ. ಒಂದು ಕಡೆ ಅಯೋಧ್ಯೆಯ ರಾಮ ಮಂದಿರದ ಗರ್ಭಗುಡಿಯಲ್ಲಿ ಮಳೆ ನೀರು ಲೀಕ್ ಆಗುತ್ತಿದ್ದರೆ, ಇನ್ನೊಂದು ಕಡೆ ನೀಟ್ ಸರಣಿಯ ಎಲ್ಲಾ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಲೀಕ್ ಆಗಿವೆ. ನೀಟ್ ಯು. ಜಿ. ಪರೀಕ್ಷೆಯಲ್ಲಿ ಮೊದಲಿಗೆ ಪೇಪರ್ ಲೀಕ್ನ ನಂತರ ಪರೀಕ್ಷಾ ಅಕ್ರಮಗಳಿಂದ ದೇಶದ 23 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಅತಂತ್ರಗೊಂಡಿದ್ದರೆ, ನೀಟ್ ಪಿ. ಜಿ. ಯು. ಜಿ. ಸಿ. ನೆಟ್, ನೀಟ್ ಜಿ. ಆರ್. ಎಫ್. ಪರೀಕ್ಷೆಗಳು ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಮುಂದೂಡಲ್ಪಟ್ಟು ಇನ್ನಷ್ಟು ವಿದ್ಯಾರ್ಥಿಗಳು ಅತಂತ್ರಗೊಂಡಿದ್ದಾರೆ. ಒಟ್ಟಾರೆಯಾಗಿ ಕೇಂದ್ರ ಸರ್ಕಾರ ಲೀಕ್ ಗಳ ಸರ್ಕಾರ ಎನ್ನುವುದು ಸಾಬೀತಾಗಿದೆ ಎಂದರು.
ಒಂದೇ ಒಂದು ಪರೀಕ್ಷೆ ಸರಿಯಾಗಿ ನಡೆಸಲಾಗದ ಸರ್ಕಾರ:
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳೂ ಅತಿ ಕಡಿಮೆ ಖರ್ಚಿನಲ್ಲಿ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣವನ್ನು ಪಡೆಯಬೇಕು ಎನ್ನುವ ಉದ್ದೇಶದಿಂದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ನೇತೃತ್ವದ ಕಾಂಗ್ರೆಸ್ ಸರಕಾರ 1984ರಲ್ಲಿ ಜಾರಿಗೆ ತಂದ ಸಿ. ಇ. ಟಿ. ಪದ್ದತಿ ಆರಂಭದಿಂದ ಇಂದಿನವರೆಗೆ ಯಾವುದೇ ಅಡೆ – ತಡೆಗಳು ಇಲ್ಲದೆ ಅತ್ಯಂತ ಸುಸೂತ್ರವಾಗಿ ನಡೆದು ಬಂದಿದೆ. ಸಿ. ಇ. ಟಿ. ಯ ಇತಿಹಾಸದಲ್ಲಿ ಇಂದಿನ ವರೆಗೆ ಒಂದೇ ಒಂದು ಸಾರಿಯೂ ಪ್ರಶ್ನೆ ಪತ್ರಿಕೆ ಸೋರಿಕೆ ಆದ ನಿದರ್ಶನವೇ ಇಲ್ಲ. ಆದರೆ ಕಳೆದ ಹತ್ತು ವರ್ಷಗಳ ಬಿಜೆಪಿ ಕೇಂದ್ರ ಸರಕಾರದ ಅವಧಿಯಲ್ಲಿ ನೀಟ್ ಸೇರಿದಂತೆ ವಿವಿಧ ಪ್ರವೇಶ ಪರೀಕ್ಷೆಗಳು ಅವ್ಯವಸ್ಥೆಯ ಆಗರ ಆಗಿದೆ. ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ತನಿಖಾ ವರದಿಯೊಂದು ಕಳೆದ 5 ವರ್ಷಗಳಲ್ಲಿ ಕೇಂದ್ರ ಸರಕಾರ ನಡೆಸಿದ 41 ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗಿದೆ ಎಂದು ಹೇಳುತ್ತದೆ. ಈ ಬಾರಿಯೂ ನೀಟ್ ಪರೀಕ್ಷೆಗೂ ಮುನ್ನ ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗಿದೆ. ಸುಮಾರು 30 ರಿಂದ 50 ಲಕ್ಷದವರೆಗೆ ಈ ಪ್ರಶ್ನೆ ಪತ್ರಿಕೆಗಳು ಕಾಳ ದಂಧೆಯಲ್ಲಿ ವಿದ್ಯಾರ್ಥಿಗಳಿಗೆ ಮಾರಾಟ ಆಗಿವೆ. ಅಸಮರ್ಪಕವಾಗಿ , ತಮಗೆ ಬೇಕಾದಂತೆ ಬೇಕು ಬೇಕಾದ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ನೀಡಲಾಗಿದೆ. ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ 67 ಮಂದಿ ವಿದ್ಯಾರ್ಥಿಗಳಲ್ಲಿ 6 ವಿದ್ಯಾರ್ಥಿಗಳು 720 ಕ್ಕೆ 720 ಅಂಕಗಳನ್ನು ಪಡೆದು ಈ ಪರೀಕ್ಷೆಗಳಲ್ಲಿ ನಡೆದ ಅಕ್ರಮವನ್ನು ಸಾಬೀತು ಪಡಿಸಿದ್ದಾರೆ. ಪರೀಕ್ಷಾ ಫಲಿತಾಂಶ ಬಂದರೂ ವಿದ್ಯಾರ್ಥಿಗಳ ಸ್ಥಿತಿ ಇನ್ನೂ ಅತಂತ್ರವಾಗಿಯೇ ಉಳಿದಿದೆ. ನೀಟ್ ಪರೀಕ್ಷೆಯ ಕೌನ್ಸಿಲಿಂಗ್ ಆರಂಭವಾಗದೆ ಸಿ. ಇ. ಟಿ. ಯ ಕೌನ್ಸೆಲಿಂಗ್ ಆರಂಭ ಆಗುವುದಿಲ್ಲ. ಹೀಗಾಗಿ ಕೇವಲ ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮಾತ್ರ ಅಲ್ಲ, ಸಿ. ಇ. ಟಿ. ಬರೆದ ಲಕ್ಷಾಂತರ ವಿದ್ಯಾರ್ಥಿಗಳು ಕೂಡ ಈ ನೀಟ್ ಅಕ್ರಮದಿಂದ ತೊಂದರೆಗೆ ಈಡಾಗಿದ್ದಾರೆ. ಇದರ ಬೆನ್ನಲ್ಲೇ ಯು ಜಿ ಸಿ ನೀಟ್, ನೀಟ್ ಪಿ. ಜಿ. ನೆಟ್ ಜಿ. ಆರ್. ಎಪ್. ಸಿ. ಎಸ್. ಆರ್. ಎಪ್. ಪರೀಕ್ಷೆಗಳು ರದ್ದಾಗಿವೆ. ನೀಟ್ ಪಿ. ಜಿ. ಪರೀಕ್ಷೆ ಆರಂಭ ಆಗುವುದಕ್ಕೆ ಕೇವಲ 10 ಗಂಟೆಗಳ ಮುನ್ನ ಪರೀಕ್ಷೆಯನ್ನು ರದ್ದು ಪಡಿಸಿ ವಿದ್ಯಾರ್ಥಿಗಳಿಗೆ ಆಘಾತವನ್ನು ನೀಡಿದ್ದಾರೆ. ಹೀಗೆ ತನ್ನ ಅಸಾಮರ್ಥ್ಯ, ಹೊಣೆಗೇಡಿತನ ಮತ್ತು ಎಡಬಿಡಂಗಿತನದಿಂದ ಮೋದಿ ನೇತೃತ್ವದ ಕೇಂದ್ರ ಸರಕಾರವು ಇಡೀ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟ ಆಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಪರೀಕ್ಷಾ ಮಾಫಿಯಾದ ಜೊತೆ ಶಾಮೀಲು?
ಈ ವರ್ಷದ ಫೆಬ್ರವರಿ 9ರಂದು ನೀಟ್ ಪರೀಕ್ಷೆಯ ಅಭ್ಯರ್ಥಿಗಳ ನೋಂದಣಿ ಆರಂಭಿಸಿ ಒಂದು ತಿಂಗಳ ಅವಧಿಯನ್ನು ನೀಡಲಾಗಿತ್ತು. ಮಾರ್ಚ್ 9 ರ ನಂತರ ಮತ್ತೆ ಒಂದು ವಾರದ ಕಾಲ ಇದನ್ನು ವಿಸ್ತರಿಸಲಾಯಿತು. ತದನಂತರ ಮತ್ತೆ ಎರಡು ದಿನಗಳ ಕಾಲ ವಿಸ್ತರಿಸಲಾಯಿತು. ಕೊನೆಗೆ ಮತ್ತೆ ಮೂರು ದಿನಗಳ ಕಾಲ ವಿಸ್ತರಿಸಲಾಯಿತು. ಹೀಗೆ ಒಂದು ತಿಂಗಳು ರಿಜಿಸ್ಟ್ರೇಷನ್ ಗೆ ಅವಧಿ ನೀಡಿದ ನಂತರ ಈ ನೋಂದಣಿ ಅವಧಿಯನ್ನು ಮತ್ತೆ ಮತ್ತೆ ಮುಂದೂಡಲು ಕಾರಣವಾದರೂ ಏನು? ಜೂನ್ 14ಕ್ಕೆ ನಿಗದಿಯಾಗಿದ್ದ ನೀಟ್ ಪರೀಕ್ಷೆ ಫಲಿತಾಂಶವನ್ನು 10 ದಿನ ಮುಂಚಿತವಾಗಿ ಅಂದ್ರೆ ಜೂನ್ ನಾಲ್ಕಕ್ಕೆ ಬಹಿರಂಗ ಪಡಿಸಿದ ಉದ್ದೇಶವಾದರೂ ಏನು? 2022 ರಲ್ಲಿ ಇಬ್ಬರು, 20201 ರಲ್ಲಿ ಮೂವರು ವಿದ್ಯಾರ್ಥಿಗಳು 720ಕ್ಕೆ 720 ಪಡೆದಿದ್ದರೆ ಈ ಬಾರಿ 67 ವಿದ್ಯಾರ್ಥಿಗಳು 720ಕ್ಕೆ 720 ಅಂಕಗಳನ್ನು ಪಡೆದ ಗುಟ್ಟು ಏನು? ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ಆರು ಮಂದಿಗೆ 720ಕ್ಕೆ 720 ಅಂಕಗಳು ಬಂದುದಾದರೂ ಹೇಗೆ? ಪರೀಕ್ಷೆ ಬರೆದ ಕೆಲವು ವಿದ್ಯಾರ್ಥಿಗಳಿಗೆ ಮಾತ್ರ ಗ್ರೇಸ್ ಮಾರ್ಕ್ ನೀಡಿದ ಕಾರಣವಾದರೂ ಏನು? ಲೋಕಸಭಾ ಚುನಾವಣೆಯ ಫಲಿತಾಂಶದ ದಿನವೇ ನೀಟ್ ಪರೀಕ್ಷೆಗಳ ಫಲಿತಾಂಶ ನಿಗಧಿತ ದಿನಕ್ಕಿಂತ 10 ದಿನ ಮುಂಚಿತವಾಗಿ ಪ್ರಕಟವಾದ ಕಾರಣವಾದರೂ ಏನು? ಇದನ್ನೆಲ್ಲ ನೋಡುವಾಗ ಕಾಣದ ಕೈಗಳು ಈ ಪರೀಕ್ಷೆಯಲ್ಲಿ ಹಸ್ತಕ್ಷೇಪವನ್ನು ನಡೆಸಿರುವುದು ಮತ್ತು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪರೀಕ್ಷಾ ಮಾಫಿಯಾದ ಜೊತೆಗೆ ಕೈಜೋಡಿಸಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ ಎಂದು ತಮ್ಮ ಸಂಶಯ ಹೊರಗೆಡವಿದರು.
ಪ್ರಧಾನಿ ಮೌನ:
ದೇಶದ ಮುಂದಿನ ಭವಿಷ್ಯ ವಾಗಿರುವ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾದ ಈ ಅಕ್ರಮ ಹೊರ ಬಿದ್ದು ತಿಂಗಳಾಗುತ್ತಾ ಬಂದರೂ ಪ್ರಧಾನಿ ಮೋದಿ ಅವರು ಈ ಬಗ್ಗೆ ಒಂದೇ ಒಂದು ಮಾತನ್ನು ಆಡದಿರುವುದು ಅತ್ಯಂತ ದೌರ್ಭಾಗ್ಯದ ಸಂಗತಿಯಾಗಿದೆ. ದೇಶದ ಭವಿಷ್ಯಕ್ಕೆ ಉತ್ತರದಾಯಿ ಆಗಿರುವ, ವಿದ್ಯಾರ್ಥಿಗಳಿಗೆ ಧೈರ್ಯವನ್ನೂ ಸಾಂತ್ವನವನ್ನು ನೀಡಬೇಕಾದ ಜವಾಬ್ದಾರಿ ಇರುವ ಮತ್ತು ಎಲ್ಲಾ ಅಕ್ರಮ ಗಳನ್ನು ತಡೆದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ನೀಡಬೇಕಾದ ಪ್ರಧಾನಿ ಮೋದಿ ಅವರು ಈ ವಿಚಾರದಲ್ಲಿ ಬಾಯಿ ಮುಚ್ಚಿ ಕುಳಿತು ತಮ್ಮ ಹಳೇ ಚಾಳಿಯನ್ನು ಮುಂದುವರೆಸಿದ್ದಾರೆ. ಇದು ಅವರಿಗೆ ವಿದ್ಯಾರ್ಥಿಗಳ ಮೇಲೆ ಎಷ್ಟು ಕಾಳಜಿ ಇದೆ ಅನ್ನುವುದನ್ನು ಸಾರಿ ಹೇಳುತ್ತದೆ. ಇಡೀ ಬಿಜೆಪಿ ಸರಕಾರವೇ ಪರೀಕ್ಷಾ ಮಾಫಿಯಾಕ್ಕೆ ಮಣಿದು ದೇಶದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದ್ದಾರೆ. ದೇಶದ ಉನ್ನತ ಶಿಕ್ಷಣ ಸಚಿವರಾದ ಧರ್ಮೇಂದ್ರ ಪ್ರಧಾನ್ ಅವರು ಕೂಡ ಈ ಬಗ್ಗೆ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಮೊದಲಿಗೆ ನೀಟ್ ಪರೀಕ್ಷೆಯಲ್ಲಿ ಯಾವುದೇ ಪ್ರಶ್ನೆ ಪತ್ರಿಕೆ ಸೋರಿಕೆ ಆಗಲಿಲ್ಲ ಎಂದು ಹೇಳಿಕೆ ನೀಡಿದ್ದ ಧರ್ಮೇಂದ್ರ ಪ್ರಧಾನ್ ಅವರು ಪರೀಕ್ಷೆಗೆ ಮೊದಲೇ ಪ್ರಶ್ನೆ ಪತ್ರಿಕೆಗಳು ಪಡೆದಿದ್ದ ವಿದ್ಯಾರ್ಥಿಗಳ ತಪ್ಪೊಪ್ಪಿಗೆ ಹೇಳಿಕೆಯ ನಂತರ ಮೌನವಾಗಿದ್ದಾರೆ. ಇದು ಅತ್ಯಂತ ನಾಚಿಕೆ ಗೇಡಿನ ಸಂಗತಿ ಆಗಿದೆ. ಈಗ ಆದೇಶಿಸಿರುವ ಸಿ. ಬಿ. ಐ. ತನಿಖೆ ನಿಷ್ಪಕ್ಷಪಾತವಾಗಿ ಮತ್ತು ಪ್ರಾಮಾಣಿಕವಾಗಿ ನಡೆದರೆ ಮಾತ್ರ ಈ ಬೃಹತ್ ಹಗರಣದ ಹಿಂದಿರುವ ಕೇಂದ್ರದ ಕಾಣದ ಕೈಗಳು ಸ್ಪಷ್ಟವಾಗಿ ಗೋಚರಿಸಲಿವೆ ಎಂದು ಹೇಳಿದರು.
ಮೋದಿ 3 ಸರಕಾರ ಬಾಲಂಗೋಚಿ ಸರಕಾರ :
ಕಳೆದ ಹತ್ತು ವರ್ಷಗಳಿಂದ ದೇಶವನ್ನು ಆಳುತ್ತಿರುವ ಮೋದಿ 1, ಮೋದಿ 2 ಸರಕಾರಗಳು ಅಂತ್ಯವಾಗಿ ಇದೀಗ ಮೋದಿ 3 ಸರಕಾರ ಅಧಿಕಾರಕ್ಕೆ ಬಂದಿದೆ.
ಕೇಂದ್ರ ಸರಕಾರದ ಚುಕ್ಕಾಣಿ ಹಿಡಿದಿರುವ ಪ್ರಧಾನ ನರೇಂದ್ರ ಮೋದಿ ಅವರ ನೇತೃತ್ವದ ಮೋದಿ 1 ವಿನಾಶಕಾರಿ ಸರಕಾರವಾದರೆ, ಮೋದಿ 2 ಭ್ರಷ್ಟಾಚಾರಿ ಸರಕಾರವಾಗಿತ್ತು, ಇದೀಗ ಬಾಲಂಗೋಚಿಗಳ ಸಹಾಯದೊಂದಿಗೆ ಅಧಿಕಾರಕ್ಕೆ ಬಂದ ಮೋದಿ 3 ಸಮ್ಮಿಶ್ರ ಸರ್ಕಾರ ಒಂದು ಸೋರಿಕೆ ಸರಕಾರವಾಗಿದೆ. ಮೊದಲ ಐದು ವರ್ಷಗಳು ನೋಟ್ ಬ್ಯಾನ್ ಮತ್ತು ಜಿ. ಎಸ್. ಟಿ. ಯಂತಹಾ ಜನಸಾಮಾನ್ಯರ ಆರ್ಥಿಕತೆಯನ್ನು ವಿನಾಶ ಗೊಳಿಸಿದ ವಿನಾಶಕಾರೀ ಸರಕಾರವಾದರೆ, 2ನೆ ಯದು ರಫೇಲ್ ಡೀಲ್ ಮತ್ತು ಚುನಾವಣಾ ಬಾಂಡ್ ಗಳೆಂಬ ಅವ್ಯವಹಾರಗಳ ಭ್ರಷ್ಟಾಚಾರೀ ಸರಕಾರ ಆಗಿತ್ತು. ಇದೀಗ ಮೋದಿ 3 ಸರಕಾರ ನೀಟ್ ಯು. ಜಿ, ನೀಟ್ ಪಿ. ಜಿ, ಯು. ಜಿ. ಸಿ. ನೆಟ್ , ಸಿ. ಎಸ್. ಐ. ಆರ್. ನೆಟ್ ಮತ್ತು ನೆಟ್ ಜಿ. ಆರ್. ಎಫ್. ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿ ಲಕ್ಷಾಂತರ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಗೆ ದೂಡಿದ ಅತ್ಯಂತ ಭ್ರಷ್ಟ ಮತ್ತು ದುರ್ಬಲ ಸರಕಾರವಾಗಿ ಮೂಡಿ ಬಂದಿದೆ.
ತನ್ನ ಮೊದಲ ಎರಡು ಅವಧಿಯಲ್ಲಿ ದೇಶದ ಆರ್ಥಿಕತೆಯನ್ನೂ, ಸೌಹಾರ್ದತೆಯನ್ನೂ ನಾಶ ಪಡಿಸಿ, ನಿರುದ್ಯೋಗ, ಬೆಲೆ ಏರಿಕೆ, ಭ್ರಷ್ಟಾಚಾರ, ಹಿಂಸಾಚಾರ ಮತ್ತು ಸರ್ವಾಧಿಕಾರಿ ಆಡಳಿತದ ಮೂಲಕ ದೇಶವನ್ನು ಅಧಃಪತನದತ್ತ ಕೊಂಡೊಯ್ದ ಮೋದಿ ನೇತೃತ್ವದ ಬಿಜೆಪಿ ಸರಕಾರ ಕಳೆದ ಚುನಾವಣೆಯಲ್ಲಿನ ತನ್ನ ಹಿನ್ನಡೆಯನ್ನು ಅರಿತುಕೊಂಡು, ತನ್ನ ಈ 3ನೇ ಅವಧಿಯಲ್ಲಾದರೂ ಜನ ಕಲ್ಯಾಣದತ್ತ ಗಮನಹರಿಸಲಿ ಎಂದು ಆಗ್ರಹಿಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರೀಸ್ ಮಸ್ಕರೇನಸ್, ಪುತ್ತೂರು ಯಂಗ್ ಬ್ರಿಗೇಡ್ ಅಧ್ಯಕ್ಷ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಂಜಿತ್ ಬಂಗೇರ, ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕ ಉಪಾಧ್ಯಕ್ಷ ರವೀಂದ್ರ ರೈ ನೆಕ್ಕಿಲು ಉಪಸ್ಥಿತರಿದ್ದರು.