ಕಾರ್ಕಳ ತಾಲೂಕು ಕಚೇರಿ ಜಂಕ್ಷನ್ ಬಳಿ ಬೈಪಾಸ್ ರಸ್ತೆಯಲ್ಲಿಯಿರುವ ಎಂಆರ್ಪಿಎಲ್ ಪೆಟ್ರೋಲ್ ಬಂಕ್ನಲ್ಲಿ ಕಾರಿಗೆ ಟ್ಯಾಂಕ್ ತುಂಬ ಪೆಟ್ರೋಲ್ ತುಂಬಿಸಿ ಹಣ ಕೊಡದೆ ಪರಾರಿಯಾಗಿದ್ದ ಅಸಾಮಿಯನ್ನು ಪತ್ತೆಹಚ್ಚುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಆಗಸ್ಟ್ 29ರಂದು ನಸುಕಿನ ಹೊತ್ತು 2.50 ಗಂಟೆಗೆ ಈ ಘಟನೆ ನಡೆದಿತ್ತು.
ಕೆವಿ 20 ಎಂಇ 8212 ನಂಬರ್ನ ಮಹೇಂದ್ರ XUV 300 ಕಾರಿಗೆ 4253.88 ರೂ. ಪೆಟ್ರೋಲ್ ಹಾಕಿಸಿಕೊಂಡು ಚಾಲಕ ಬಂಕ್ನ ಸಿಬ್ಬಂದಿ ಆಕಾಶ್ ಎಂಬವರಿಗೆ ಯುಪಿಐ ಸ್ಕ್ಯಾನರ್ ತರುವಂತೆ ಹೇಳಿದ್ದ. ಆಕಾಶ್ ಯುಪಿಐ ಸ್ಕ್ಯಾನರ್ ತರಲು ಹೋದಾಗ ಚಾಲಕ ಕಾರನ್ನು ಚಲಾಯಿಸಿಕೊಂಡು ಹೋಗಿ ಪೆಟ್ರೋಲ್ ಹಾಕಿದ 4253.88 ರೂ. ನೀಡದೆ ಮೋಸ ಮಾಡಿದ್ದ ಎಂದು ದೂರಲಾಗಿತ್ತು.
ಕಾರು ಪೆಟ್ರೋಲ್ ಬಂಕ್ ಎದುರುಗಡೆಯ ರಸ್ತೆಯಾಗಿ ಸ್ವಲ್ಪ ಮುಂದಕ್ಕೆ ಹೋಗಿದ್ದು, ಕೆಲವೇ ಕ್ಷಣದಲ್ಲಿ ಮತ್ತೆ ಹಿಂತಿರುಗಿದೆ. ಆ ವೇಳೆಗೆ ನಾಯಿಗಳು ಕಾರನ್ನು ಬೆನ್ನಟ್ಟಿಕೊಂಡು ಬೊಗಳಿರುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿತ್ತು. ಇದಲ್ಲದೆ ಕುಕ್ಕುಂದೂರು ಗಣಿತ ನಗರದ ಮೂಲಕವಾಗಿ ಹಿರಿಯಡ್ಕ ಮಾರ್ಗವಾಗಿ ಹಾದು ಹೋದ ಕಾರಿನ ದೃಶ್ಯ ಎರಡು ಕಡೆಗಳಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾಗಳಲ್ಲೂ ಸೆರೆಯಾಗಿತ್ತು.
ಕಾರು ಹೊರಟು ಹೋದ ವೇಳೆ ಹಾಗೂ ಗಣಿತ ನಗರ ಮತ್ತು ಹಿರಿಯಡ್ಕ ಮಾರ್ಗವಾಗಿ ಹಾದು ಹೋದ ವಾಹನಗಳ ವಿವರ ಪಡೆದ ಪೊಲೀಸರು ಆರೋಪಿ ಚಲಾಯಿಸಿದ ಕಾರು ಪತ್ತೆ ಹಚ್ಚಿದ್ದಾರೆ. ಕಾರು ಬಂಟಕಲ್ಲಿನ ವ್ಯಕ್ತಿಗೆ ಸೇರಿದ್ದು ಎಂಬ ಮಾಹಿತಿ ಲಭಿಸಿದೆ.