ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಪಂಜಾಬ್ ಕಾಂಗ್ರೆಸ್ನ ಮಾಜಿ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರಿಗೆ ಬಿಗ್ ಶಾಕ್ ಎದುರಾಗಿದೆ. ಯಾವುದೇ ಅಲೋಪತಿ ಔಷಧಗಳಿಲ್ಲದೆ 4ನೇ ಹಂತದ ಕ್ಯಾನ್ಸರ್ನಿಂದ ತಮ್ಮಪತ್ನಿ ಅದ್ಭುತವಾಗಿ ಚೇತರಿಸಿಕೊಂಡಿದ್ದಾರೆ ಎಂದು ಹೇಳಿದ ಬೆನ್ನಲ್ಲೇ ಅವರ ವಿರುದ್ಧ ಛತ್ತೀಸ್ಗಢ ಸಿವಿಲ್ ಸೊಸೈಟಿ ಆಕ್ರೋಶ ವ್ಯಕ್ತಪಡಿಸಿದೆ.
ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದ ದಾಖಲೆಗಳನ್ನು ವಾರದೊಳಗೆ ಸಲ್ಲಿಸುವಂತೆ ಸಿಧು ಅವರ ಪತ್ನಿ ನವಜೋತ್ ಕೌರ್ಗೆ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ. ಇಲ್ಲವಾದಲ್ಲಿ 850 ಕೋಟಿ ರೂ. ಪರಿಹಾರ ನೀಡುವಂತೆ ನೋಟಿಸ್ ಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ, ಸಿಧು ಅವರ ಹೇಳಿಕೆಗಳು ಕ್ಯಾನ್ಸರ್ ಪೀಡಿತರನ್ನು ದಾರಿತಪ್ಪಿಸುತ್ತಿವೆ. ಹೀಗಾಗಿ ಅವರು ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಛತ್ತೀಸ್ಗಢ ಸಿವಿಲ್ ಸೊಸೈಟಿ ಒತ್ತಾಯಿಸಿದೆ.
ಆಹಾರದ ನಿಯಂತ್ರಣದಿಂದಾಗಿ ತಮ್ಮ ಪತ್ನಿ ನವಜೋತ್ ಕೌರ್ ಅವರು ನಾಲ್ಕನೇ ಹಂತದ ಕ್ಯಾನ್ಸರ್ (ಸ್ತನ ಕ್ಯಾನ್ಸರ್) ನಿಂದ ಗುಣಮುಖರಾಗಿದ್ದಾರೆ ಎಂದು ಸಿಧು ಅವರು ಇತ್ತೀಚೆಗೆ ಘೋಷಿಸಿದ್ದರು. ಹಾಲು ಮತ್ತು ಸಕ್ಕರೆ ಪದಾರ್ಥಗಳಿಂದ ದೂರವಿದ್ದು, ನಿಂಬೆ ರಸ, ಹಸಿರೆಲೆ, ಅರಿಶಿನ, ಬೇವು ಹಾಗೂ ತುಳಸಿ ಮುಂತಾದ ಪದಾರ್ಥಗಳನ್ನು ಬಳಸಿ ಕೇವಲ 40 ದಿನಗಳಲ್ಲಿ ತಮ್ಮ ಪತ್ನಿ ವೈದ್ಯಕೀಯವಾಗಿ ಕ್ಯಾನ್ಸರ್ ಅನ್ನು ಸೋಲಿಸಿದ್ದಾರೆ ಎಂದು ಮಾಧ್ಯಮಗೋಷ್ಠಿಯಲ್ಲಿ ಸಿಧು ಬಹಿರಂಗಪಡಿಸಿದರು.
ಅನೇಕ ವೈದ್ಯಕೀಯ ತಜ್ಞರು ಮತ್ತು ಆಂಕೊಲಾಜಿಸ್ಟಳು ಸಹ ಸಿಧು ಅವರ ಕಾಮೆಂಟ್ಗಳನ್ನು ಖಂಡಿಸಿದ್ದಾರೆ. ಟಾಟಾ ಮೆಮೋರಿಯಲ್ ಆಸ್ಪತ್ರೆ ಕೂಡ ಸಿಧು ಹೇಳಿಕೆಗೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ ಎಂದು ಘೋಷಿಸಿದೆ. ಶಸ್ತ್ರಚಿಕಿತ್ಸೆ ವಿಕಿರಣ ಚಿಕಿತ್ಸೆ ಮತ್ತು ಕೀಮೋಥೆರಪಿಯಂತಹ ಸಾಬೀತಾದ ಚಿಕಿತ್ಸೆಗಳಿಂದ ಮಾತ್ರ ಕ್ಯಾನ್ಸರ್ ಅನ್ನು ಗುಣಪಡಿಸಬಹುದು ಎಂದು ವೈದ್ಯರು ಹೇಳಿದ್ದಾರೆ
ಇತ್ತೀಚೆಗೆ, ಛತ್ತೀಸ್ಗಢ ಸಿವಿಲ್ ಸೊಸೈಟಿಯು ಈ ಹೇಳಿಕೆಯನ್ನು ಬಲವಾಗಿ ಖಂಡಿಸಿದೆ. ಸಿಧು ಅವರ ಹೇಳಿಕೆಗಳು ಸಂಶಯಾಸ್ಪದ, ದಾರಿತಪ್ಪಿಸುವ ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಇತರರಿಗೆ ಅಪಾಯಕಾರಿ ಎಂದು ಸೊಸೈಟಿಯ ಸಂಚಾಲಕ ಡಾ.ಕುಲದೀಪ್ ಸೋಲಂಕಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನನ್ನ ಪತ್ನಿ ಸ್ಟೇಜ್ 4 ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಇದು ಬಹಳ ಅಪರೂಪದ ಮೆಟಾಸ್ಟಾಸಿಸ್ ಎನ್ನಲಾಗಿತ್ತು. ಇದರಿಂದ ಆಕೆಯನ್ನು ಗುಣಮುಖ ಮಾಡಲು ಸ್ತನ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಪಟಿಯಾಲಾದ ರಾಜೀಂದ್ರ ಆಸ್ಪತ್ರೆ ಮತ್ತು ಯಮುನಾನಗರದ ಡಾ.ಅರ್ಯಂ ಸಿಂಗ್ ಆಸ್ಪತ್ರೆಯಲ್ಲಿ ಸುದೀರ್ಘ ಚಿಕಿತ್ಸೆ ಪಡೆದಿದ್ದಾರೆ. ಈ ಸವಾಲಿನ ಹಾದಿ ಕೌರ್ಗೆ ಬಹಳ ಕಷ್ಟಕರವಾಗಿತ್ತು. ನೋವಿನ ನಡುವೆಯೇ ಕಿಮೊಥೆರಪಿ ಸೆಷನ್ಗಳಿಗೆ ಹೋಗಿದ್ದಾರೆ ಎಂದು ಹೇಳಿದರು.
ಪತ್ನಿಗೆ ಕ್ಯಾನ್ಸರ್ ಇರುವುದು ಗೊತ್ತಾದಾಗ ಇಡೀ ಕುಟುಂಬವು ಭಾರೀ ಸಂಶೋಧನೆಯಲ್ಲಿ ತೊಡಗಿದೆವು. ಭಾರತೀಯ ಮತ್ತು ಯುಎಸ್ ವೈದ್ಯರು ಹಾಗೂ ಆಯುರ್ವೇದದಲ್ಲಿ ಕ್ಯಾನ್ಸರ್ ಕುರಿತು ಬರೆದ ಪುಸ್ತಕಗಳನ್ನು ಓದಿ, ಒಂದಷ್ಟು ವಿಷಯ ಅರಿತುಕೊಂಡೆವು. ಜೀವನಶೈಲಿ ಮತ್ತು ಆಹಾರ ಪದ್ಧತಿಯನ್ನು ಬದಲಾಯಿಸಬೇಕು ಎಂಬ ಸಾಮಾನ್ಯ ಅಂಶ ನಮಗೆ ಸ್ಪಷ್ಟವಾಗಿ ತಿಳಿಯಿತು. ಕ್ಯಾನ್ಸರ್ ಉರಿಯೂತವು ಹಾಲು, ಗೋಧಿಯಂತಹ ಕಾರ್ಬೋಹೈಡ್ರೆಟ್ಗಳು, ಸಂಸ್ಕರಿಸಿದ ಮೈದಾ, ಸಕ್ಕರೆ, ಎಣ್ಣೆ, ಹಾಲಿನ ಉತ್ಪನ್ನಗಳು ಮತ್ತು ಗಾಳಿಯಿರುವ ಪಾನೀಯಗಳಿಂದ ಬರುತ್ತದೆ ಎಂದರು.
ಕೌರ್ ಇದನ್ನೆಲ್ಲ ಅರಿತುಕೊಂಡರು. ಇಂತಹ ಆಹಾರದಿಂದ ಆಕೆ ಸಂಪೂರ್ಣವಾಗಿ ದೂರ ಉಳಿದರು. ನಿಂಬೆ, ಬೇವು, ಹಸಿ ಅರಿಶಿನ, ಬೆಳ್ಳುಳ್ಳಿ ಇತ್ಯಾದಿಗಳೊಂದಿಗೆ ಬೆಚ್ಚಗಿನ ನೀರು ಮುಂತಾದ ಪ್ರಾಚೀನ ‘ದೇಸಿ’ ಪರಿಹಾರಗಳನ್ನು ಅವರು ಸೇವಿಸುತ್ತ ಬಂದರು. ಇದು ಅವರ ಆಹಾರ ಪದ್ಧತಿ ಮೇಲೆ ಉತ್ತಮ ಪ್ರಭಾವವೂ ಬೀರಿತು. ಜತೆಗೆ ಈ ಆಹಾರವು ಕ್ಯಾನ್ಸರ್ನ ಜೀವಿತಾವಧಿಯನ್ನು ಕಡಿಮೆ ಮಾಡಲು ಸಹಾಯ ಮಾಡಿತು. ಕೇವಲ 45 ದಿನಗಳಲ್ಲಿ ಪತ್ನಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಆಗ ಅವರಿಗೆ PET ಸ್ಕ್ಯಾನ್ ಮಾಡಿದ ವೈದ್ಯರಿಗೆ ಕ್ಯಾನ್ಸರ್ ಅಂಶ ಇರುವುದು ಪತ್ತೆಯಾಗಲಿಲ್ಲ. ವೈದ್ಯಕೀಯ ಚಿಕಿತ್ಸೆಯೊಟ್ಟಿಗೆ ಕೌರ್ ಅವರ ಇಚ್ಛಾಶಕ್ತಿ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಯೇ ಈ ಫಲಿತಾಂಶಕ್ಕೆ ಕಾರಣ ಎಂದು ಸಿಧು ಸಂತಸ ವ್ಯಕ್ತಪಡಿಸಿದರು.