ಬೆಂಗಳೂರು: ಫೆ. 27ರಂದು ನಡೆದ ರಾಜ್ಯಸಭಾ ಚುನಾವಣೆಯ ವಿಜಯೋತ್ಸವ ಸಂದರ್ಭದಲ್ಲಿ ವಿಧಾನ ಸೌಧದಲ್ಲೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ಮೂವರಿಗೆ ಬೆಂಗಳೂರಿನ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು (ಎಸಿಎಂಎಂ) ಷರತ್ತುಬದ್ಧ ಜಾಮೀನು ನೀಡಿದೆ.
ಬಂಧಿತರಾದ ದೆಹಲಿಯ ಕಿಶನ್ ಗಂಜ್ನ ಮೊಹಮ್ಮದ್ ಇಲ್ತಾಜ್, ಹಾವೇರಿ ಜಿಲ್ಲೆ ಬ್ಯಾಡಗಿಯ ಮೊಹಮ್ಮದ್ ಶಫಿ ನಾಶಿಪುಡಿ, ಬೆಂಗಳೂರಿನ ಜಯಮಹಲ್ ನಿವಾಸಿ ಡಿ.ಎಸ್ ಮುನಾವರ್ ಅಹ್ಮದ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 39ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ವಿ ವಿಜೇತ್ ಪುರಸ್ಕರಿಸಿ ಜಾಮೀನು ನೀಡಿದ್ದಾರೆ.
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಯ್ಯದ್ ನಾಸೀರ್ ಹುಸೇನ್ ಅವರು ಜಯ ಗಳಿಸಿದ ಬಳಿಕ ವಿಜಯೋತ್ಸವ ಆಚರಿಸುತ್ತಿದ್ದ ಸಂದರ್ಭದಲ್ಲಿ ಕೆಲವು ವ್ಯಕ್ತಿಗಳು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಲಾಗಿತ್ತು. ಕಾಂಗ್ರೆಸ್ ನಾಯಕರು ಆರಂಭದಲ್ಲಿ ಇದನ್ನು ನಿರಾಕರಿಸಿದ್ದರೂ ಎಫ್ಎಸ್ಎಲ್ ವರದಿ ಬಂದ ಬಳಿಕ ಮೂವರನ್ನು ಬಂಧಿಸಿದ್ದರು. ಇದೀಗ ಅವರಿಗೆ ಜಾಮೀನು ದೊರಕಿದೆ.
ವಿಧಾನ ಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಕೂಗಿದ ಪ್ರಕರಣ ರಾಜಕೀಯವಾಗಿ ಭಾರಿ ತಿರುವುಗಳನ್ನು ಪಡೆದುಕೊಂಡಿತ್ತು.