ಕರ್ನಾಟಕ ಸರ್ಕಾರ ‘ಅನ್ನಭಾಗ್ಯ’ ಯೋಜನೆಯಡಿ ಫಲಾನುಭವಿಗಳಿಗೆ ಸದ್ಯ 5 ಕೆಜಿ ಅಕ್ಕಿ ಬದಲಿಗೆ ಹಣ ವರ್ಗಾವಣೆ ಮಾಡುತ್ತಿದ್ದು, ಇನ್ನು ಮುಂದೆ ಎಣ್ಣೆ, ಬೇಳೆ, ಸಕ್ಕರೆ ಮತ್ತು ಇತರ ಆಹಾರ ಪದಾರ್ಥಗಳನ್ನು ನೀಡುವ ಸಾಧ್ಯತೆ ಇದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಪ್ರತಿ ಫಲಾನುಭವಿಗೆ ತಿಂಗಳಿಗೆ 10 ಕೆಜಿ ಅಕ್ಕಿ ನೀಡುವುದಾಗಿ ಭರವಸೆ ನೀಡಿದ್ದರೂ, ಕೇವಲ 5 ಕೆಜಿ ಅಕ್ಕಿಯನ್ನು ಮಾತ್ರ ಪೂರೈಸಲು ಸಾಧ್ಯವಾಗಿದ್ದು, ಉಳಿದ 5 ಕೆಜಿ ಬದಲಿಗೆ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡುತ್ತಿದೆ.
ರಾಜ್ಯ ಸರಕಾರ ನಡೆಸಿದ ಸಮೀಕ್ಷೆಯಲ್ಲಿ ಶೇ 93ರಷ್ಟು ಫಲಾನುಭವಿಗಳು ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯ ಬದಲಿಗೆ 5 ಕೆಜಿ ಅಕ್ಕಿ ಜತೆಗೆ ಇತರೆ ಅಗತ್ಯ ವಸ್ತುಗಳನ್ನು ಪಡೆಯಲು ಆಸಕ್ತಿ ತೋರಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ. ಈ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸಚಿವರು ಹೇಳಿದ್ದಾರೆ. ನವದೆಹಲಿಯಲ್ಲಿರುವ ಮುನಿಯಪ್ಪ ಮಂಗಳವಾರ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಪಡಿತರ ವಿತರಣಾ ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿ ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡುವಂತೆ ಮನವಿ ಸಲ್ಲಿಸಿದ್ದಾರೆ.
ಅಕ್ಕಿ ಬದಲಿಗೆ ಬೇರೆ ಆಹಾರ ವಸ್ತುಗಳನ್ನು ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಯಾವ ರೀತಿ ಮಾಡಬೇಕು ಎಂದು ನಿರ್ಧರಿಸುತ್ತೇವೆ ಎಂದು ಮುನಿಯಪ್ಪ ಹೇಳಿದ್ದಾರೆ.
ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಪಡಿತರ ಕಾರ್ಡ್ ಹೊಂದಿರುವವರಿಗೆ ಉಚಿತ ಅಕ್ಕಿ ವಿತರಿಸಲಾಗುತ್ತಿದ್ದು, ಕರ್ನಾಟಕದಲ್ಲಿ 13 ಲಕ್ಷ ಕಾರ್ಡ್ಗಳಿವೆ ಎಂದು ವಿವರಿಸಿದರು. ಈ ಯೋಜನೆಯಡಿ 50 ಲಕ್ಷಕ್ಕೂ ಹೆಚ್ಚು ಜನರು ಫಲಾನುಭವಿಗಳಾಗಿದ್ದಾರೆ. ಅವರ ಅಗತ್ಯಗಳನ್ನು ಪೂರೈಸಲು, ರಾಜ್ಯಕ್ಕೆ ಪ್ರತಿ ತಿಂಗಳು 20 ಮೆಟ್ರಿಕ್ ಟನ್ ಅಕ್ಕಿ ಅಗತ್ಯವಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕೇಂದ್ರದಿಂದ ಅಕ್ಕಿ ಸಿಗುತ್ತಿದೆ, ದರ ಕಡಿಮೆ ಮಾಡುವ ವಿಶ್ವಾಸವಿದೆ: ಮುನಿಯಪ್ಪ
ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ ಆಫ್ ಇಂಡಿಯಾ ಲಿಮಿಟೆಡ್ ನಮಗೆ ಕೆಜಿಗೆ 28 ರೂ.ಗೆ ಅಕ್ಕಿಯನ್ನು ನೀಡಿದೆ ಎಂದು ಅವರು ತಿಳಿಸಿದ್ದಾರೆ. ಈ ಮಧ್ಯೆ ರಾಜ್ಯ ಸರ್ಕಾರವು ಭಾರತೀಯ ಆಹಾರ ನಿಗಮವನ್ನು (ಎಫ್ಸಿಐ) ಸಂಪರ್ಕಿಸಿದೆ. ಎಫ್ಸಿಐಯಲ್ಲಿ ಕೆಜಿಗೆ 34 ರೂ.ನಂತೆ ಅಕ್ಕಿ ನೀಡಲಾಗುತ್ತಿದೆ. ಆದರೆ ಈಗ ಕೇಂದ್ರದಿಂದ ಕೆಜಿಗೆ 28 ರೂ.ಗೆ ಖರೀದಿಸುವಂತೆ ಸಂಬಂಧಪಟ್ಟ ಸಚಿವರಾದ ಜೋಶಿ ಅವರೊಂದಿಗೆ ಚರ್ಚಿಸಿದ್ದೇನೆ. ರಾಜ್ಯ ಸರ್ಕಾರದ ಅವಶ್ಯಕತೆಗೆ ಅನುಗುಣವಾಗಿ ಅಕ್ಕಿ ಖರೀದಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಅನ್ನಭಾಗ್ಯ ಯೋಜನೆಯಡಿ ಕಾಂಗ್ರೆಸ್ ಸರ್ಕಾರ ಬಿಪಿಎಲ್ ಕಾರ್ಡ್ದಾರರಿಗೆ 10 ಕೆಜಿ ಉಚಿತ ಅಕ್ಕಿ ನೀಡುವ ಭರವಸೆ ನೀಡಿತ್ತು. ಹೆಚ್ಚುವರಿ ಅಕ್ಕಿ ನೀಡಲು ಎಫ್ಸಿಐ ನಿರಾಕರಿಸಿದ ನಂತರ ರಾಜ್ಯ ಸರ್ಕಾರವು 5 ಕೆಜಿ ಅಕ್ಕಿ ಬದಲಿಗೆ ತಲಾ 170 ರೂ.ನಂತೆ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುತ್ತಿದೆ.