ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಅಪಹರಣ ಆರೋಪದಡಿ ಹಲವು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದರೆ ಏನಾಗುತ್ತಿತ್ತು.
ಹೀಗೊಂದು ಪ್ರಶ್ನೆ ಎಲ್ಲರ ತಲೆಯಲ್ಲೂ ಓಡಾಡುತ್ತಿತ್ತು. ಇದಕ್ಕೆ ಉತ್ತರವೂ ಇಲ್ಲದಿಲ್ಲ. ಕಾನೂನು ತಜ್ಞರು ಆಗಲೇ ಉತ್ತರವನ್ನು ಮುಂದಿಟ್ಟಿದ್ದರು.
ಹೌದು, ಕಾನೂನು ತಜ್ಞರ ಪ್ರಕಾರ, ಪ್ರಜ್ವಲ್ ರೇವಣ್ಣ ಸಂಸದನಾಗಿ ಆಯ್ಕೆ ಆಗಿರುತ್ತಿದ್ದರೆ ಸಂಸದ ಸ್ಥಾನ ಅಬಾಧಿತವಾಗಿ ಮುಂದುವರಿಯುತ್ತಿತ್ತು. ಹಾಗಾದರೆ ಕಾನೂನು ಏನು ಹೇಳುತ್ತದೆ. ಅದಕ್ಕಿರುವ ಕಾಯ್ದೆಗಳ್ಯಾವುವು ನೋಡಿಕೊಂಡು ಬರೋಣ.
ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿದ್ದರು. ಏಪ್ರಿಲ್ 26ರಂದು ಮತದಾನ ನಡೆದಿತ್ತು. ಜೂನ್ 4ರಂದು ಮತ ಎಣಿಕೆ ನಡೆದು, ಫಲಿತಾಂಶ ಹೊರಬಿದ್ದಿದೆ. ಈ ಮಧ್ಯೆಯೇ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದ ವಿಡಿಯೊ ತುಣುಕುಗಳು ಬಹಿರಂಗಗೊಳ್ಳುತ್ತಿದ್ದಂತೆಯೇ ವಿದೇಶಕ್ಕೆ ಪರಾರಿಯಾಗಿರುವ ಪ್ರಜ್ವಲ್, ಅವರು ಮರಳಿ ಬರುತ್ತಿದ್ದಂತೆ ಎಸ್.ಐ.ಟಿ. ತಂಡ ಬಂಧಿಸಿ ವಿಚಾರಣೆಗೆ ಒಳಪಡಿಸಿದೆ.
ಪ್ರಜ್ವಲ್ ಬಂಧನವಾದರೆ ಚುನಾವಣಾ ಫಲಿತಾಂಶದ ನಂತರ ನಡೆಯಬಹುದಾದ ಬೆಳವಣಿಗೆಗಳ ಕುರಿತು ಜನರಲ್ಲಿ ತೀವ್ರ ಕುತೂಹಲವಿತ್ತು. ಗೆದ್ದರೆ ಸಂಸದ ಸ್ಥಾನ ಉಳಿಯುವುದೆ? ಬಂಧನದಲ್ಲಿದ್ದು ಪ್ರಮಾಣವಚನ ಸ್ವೀಕರಿಸಲು ಅವಕಾಶವಿದೆಯೆ ಎಂಬ ಪ್ರಶ್ನೆಗಳ ಸುತ್ತ ಜೋರಾಗಿ ಚರ್ಚೆ ನಡೆಯುತ್ತಿತ್ತು.
ಕಾನೂನು ತಜ್ಞರ ಪ್ರಕಾರ, ಪ್ರಜ್ವಲ್ ರೇವಣ್ಣ ಮತ್ತೆ ಸಂಸದನಾಗಿ ಆಯ್ಕೆಯಾದರೆ ಪ್ರಮಾಣವಚನ ಸ್ವೀಕರಿಸುವುದು ಮತ್ತು ಸಂಸದ ಹುದ್ದೆಯಲ್ಲಿ ಮುಂದುವರಿಯುವುದಕ್ಕೆ ಕಾನೂನಿನ ಯಾವ ಅಡತಡೆಯೂ ಇಲ್ಲ. ಆರೋಪ ಹೊತ್ತವರನ್ನು ಚುನಾಯಿತ ಪ್ರತಿನಿಧಿಯ ಸ್ಥಾನದಿಂದ ಅನರ್ಹಗೊಳಿಸುವ ಕಾನೂನು ದೇಶದಲ್ಲಿ ಇಲ್ಲದಿರುವುದರಿಂದ ಅಬಾಧಿತವಾಗಿ ಸಂಸದ ಸ್ಥಾನದಲ್ಲಿ ಮುಂದುವರಿಯಬಹುದು.
ಪ್ರಜಾಪ್ರಾತಿನಿಧ್ಯ ಕಾಯ್ದೆ–1951ರ ಅಡಿಯಲ್ಲಿ ಸಂಸತ್ ಮತ್ತು ವಿಧಾನ ಮಂಡಲದ ಚುನಾವಣೆಗಳು ನಡೆಯುತ್ತವೆ. ಈ ಕಾಯ್ದೆಯ ಸೆಕ್ಷನ್ 8ರ ಪ್ರಕಾರ, ಸಂಸದ ಅಥವಾ ಶಾಸಕರಾಗಿ ಆಯ್ಕೆಯಾದವರು ಕೆಲವು ನಿರ್ದಿಷ್ಟ ಅಪರಾಧಗಳು ಸಾಬೀತಾಗಿ ಎರಡು ವರ್ಷಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಗುರಿಯಾದರೆ ಮಾತ್ರ ಅವರನ್ನು ಅನರ್ಹಗೊಳಿಸಬಹುದು.
ವಿಚಾರಣಾಧೀನ ಅಥವಾ ಸಜಾ ಬಂದಿಯಾಗಿ ಜೈಲಿನಲ್ಲಿರುವವರು ಮತದಾನಕ್ಕೆ ಅರ್ಹರಲ್ಲ ಎಂಬುದು ಪ್ರಜಾಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 62 (5)ರಲ್ಲಿದೆ. ಆದರೆ, ಅಂತಹ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಯಾವ ನಿರ್ಬಂಧವೂ ಇಲ್ಲ.
ಈ ಕುರಿತು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ‘ಎರಡು ವರ್ಷಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಗುರಿಯಾಗುವ ಚುನಾಯಿತ ಪ್ರತಿನಿಧಿಗಳನ್ನು ಮಾತ್ರವೇ ಅನರ್ಹಗೊಳಿಸಲು ನಮ್ಮ ಕಾನೂನಿನಲ್ಲಿ ಅವಕಾಶವಿದೆ. ಪ್ರಜ್ವಲ್ ರೇವಣ್ಣ ಮರು ಆಯ್ಕೆಯಾದರೆ ಅದೇ ಹುದ್ದೆಯಲ್ಲಿ ಮುಂದುವರಿಯಬಹುದು’ ಎಂದು ತಿಳಿಸಿದ್ದರು.
‘ಹಲವು ರಾಜಕಾರಣಿಗಳು ಜೈಲಿನಲ್ಲಿದ್ದುಕೊಂಡೇ ಚುನಾವಣೆಗೆ ಸ್ಪರ್ಧಿಸಿ ಗೆದ್ದ ಉದಾಹರಣೆಗಳಿವೆ. ಭ್ರಷ್ಟಾಚಾರ ಆರೋಪದಡಿ ಬಂಧಿತರಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜಾಮೀನು ಪಡೆದು ಈ ಲೋಕಸಭಾ ಚುನಾವಣೆಯಲ್ಲಿ ಪ್ರಚಾರ ನಡೆಸಿದ್ದರು.
ಪ್ರಜ್ವಲ್ ಪುನರಾಯ್ಕೆ ಆಗಿ, ದೇಶಕ್ಕೆ ಬಂದಿಳಿದ ತಕ್ಷಣ ಬಂಧನವಾದರೂ ಪ್ರಮಾಣವಚನ ಸ್ವೀಕಾರಕ್ಕೂ ಅಡ್ಡಿ ಇರುವುದಿಲ್ಲ. ಪ್ರಕರಣದ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕಾಗುತ್ತದೆ. ನ್ಯಾಯಾಲಯದಿಂದ ಆದೇಶ ಪಡೆದು ಸಂಸತ್ತಿಗೆ ಹೋಗಿ ಪ್ರಮಾಣ ವಚನ ಸ್ವೀಕರಿಸಬಹುದು. ಅಪರಾಧಿ ಎಂದು ಸಾಬೀತಾಗಿ, ಶಿಕ್ಷೆಯ ಪ್ರಮಾಣ ಪ್ರಕಟವಾಗುವವರೆಗೂ ಸಂಸದ ಸ್ಥಾನಕ್ಕೆ ಯಾವ ತೊಂದರೆಯೂ ಇರದು ಎಂಬುದು ಕಾನೂನು ತಜ್ಞರ ಅಭಿಪ್ರಾಯ.
ಮಾರ್ಚ್ ತಿಂಗಳಲ್ಲಿ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಜೈಲಿನಿಂದಲೇ ಸ್ಪರ್ಧಿಸಿ ಆಯ್ಕೆಯಾಗಿದ್ದ ಎಎಪಿಯ ಸಂಜಯ್ ಸಿಂಗ್ ಅವರು, ನ್ಯಾಯಾಲಯದ ಅನುಮತಿ ಪಡೆದು ರಾಜ್ಯಸಭೆಗೆ ಹಾಜರಾಗಿ ಪ್ರಮಾಣ ಸ್ವೀಕರಿಸಿದ್ದರು.
ಯಾವ ಕುತ್ತೂ ಇಲ್ಲ :
`ಪ್ರಜ್ವಲ್ ರೇವಣ್ಣ ಸಂಸದನಾಗಿ ಆಯ್ಕೆಯಾದರೆ ಹುದ್ದೆಯಲ್ಲಿ ಮುಂದುವರಿಯಲು ದೇಶದಲ್ಲಿ ಈಗ ಇರುವ ಕಾನೂನಿನಲ್ಲಿ ಅವಕಾಶವಿದೆ. ಆರೋಪಿಯಾದರೂ ಸಂಸದ ಸ್ಥಾನಕ್ಕೆ ಯಾವ ಕುತ್ತೂ ಇಲ್ಲ’ ಎಂದು ರಾಜ್ಯದ ಹಿರಿಯ ವಕೀಲರೊಬ್ಬರು ಪ್ರತಿಕ್ರಿಯಿಸಿದ್ದರು.
ಪ್ರಜ್ವಲ್ ರೇವಣ್ಣ ಲೈಂಗಿಕ ಪ್ರಕರಣದ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡಲಿದೆ ಕಾಂಗ್ರೆಸ್:
ದೇಶಾದ್ಯಂತ ಸದ್ದು ಮಾಡುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ಆರ್ಥಿಕ ನೆರವು ನೀಡಲಿದೆ ಎಂದು ಆಡಳಿತರೂಢ ಕಾಂಗ್ರೆಸ್ ಪಕ್ಷ ಘೋಷಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಪಕ್ಷದ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಈ ಘೋಷಣೆ ಮಾಡಿದ್ದಾರೆ. ಈ ವೇಳೆ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
“ಕಳೆದ 75 ವರ್ಷಗಳಲ್ಲಿ ಎಂದೂ ನಡೆಯದ ಗಂಭೀರ ಪ್ರಕರಣ ಇದಾಗಿದ್ದು, ನೂರಾರು ಸಂಖ್ಯೆಯಲ್ಲಿರುವ ಅತ್ಯಾಚಾರ ಪ್ರಕರಣದ ಸಂತ್ರಸ್ತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್ಥಿಕ ನೆರವು ಘೋಷಿಸಿದ್ದಾರೆ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.
ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ – ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮೊಮ್ಮಗ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಅಣ್ಣನ ಮಗ. ನೂರಾರು ಸ್ಪಷ್ಟ ವೀಡಿಯೊಗಳು ಬಹಿರಂಗವಾಗಿ ಹೊರಬಂದ ನಂತರ ಅತ್ಯಾಚಾರ ಮತ್ತು ಕಿರುಕುಳಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ದೂರು ದಾಖಲಾಗಿತ್ತು.
ಮೈತ್ರಿ ನಾಯಕರಿಂದ ರಕ್ಷಣೆ!
ರಣದೀಪ್ ಸಿಂಗ್ ಸುರ್ಜೇವಾಲಾ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ‘ಸಾಮೂಹಿಕ ಅತ್ಯಾಚಾರಿ’ ಪ್ರಜ್ವಲ್ ರೇವಣ್ಣ, ತಮ್ಮ ಮೈತ್ರಿ ಪಾಲುದಾರ ಜೆಡಿಎಸ್ ಅಭ್ಯರ್ಥಿಯನ್ನು ರಕ್ಷಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆರೋಪಿಸಿದ್ದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಜೊತೆಯಲ್ಲಿ ಇದ್ದರು.
ಪ್ರಜ್ವಲ್ ಬಗ್ಗೆ ಮಾಹಿತಿ ಇದ್ದರೂ ಬಿಜೆಪಿ – ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದು ಏಕೆ?. ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪಲಾಯನ ಮಾಡುವುದನ್ನು ವಿದೇಶಾಂಗ ಸಚಿವಾಲಯ ಏಕೆ ತಡೆಯಲಿಲ್ಲ. ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್ಪೋರ್ಟ್ ಅನ್ನು ಪ್ರಧಾನಿ ಏಕೆ ರದ್ದುಗೊಳಿಸಲಿಲ್ಲ ಮತ್ತು ಅವರನ್ನು ಮರಳಿ ಕರೆತರಲು ಇಂಟರ್ಪೋಲ್ ಮೂಲಕ ಬ್ಲೂ ಕಾರ್ನರ್ ನೋಟಿಸ್ ಏಕೆ ನೀಡಲಿಲ್ಲ..? ಎಂದು ಸುರ್ಜೇವಾಲಾ ಪ್ರಶ್ನಿಸಿದ್ದರು.
ಪ್ರಜ್ವಲ್ ರೇವಣ್ಣ ಸೆಕ್ಸ್ ವಿಡಿಯೋ ಪ್ರಕರಣ: ಸಾಹಿತಿಗಳು, ಬರಹಗಾರರಿಂದ ಸಿಎಂ ಸಿದ್ದರಾಮಯ್ಯಗೆ ಬಹಿರಂಗ ಪತ್ರ
ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹಿತಿಗಳು, ಬರಹಗಾರರು, ಮಹಿಳಾ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಬಹಿರಂಗ ಪತ್ರವೊಂದನ್ನು ಬರೆದಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಪ್ರಜ್ವಲ್ ರೇವಣ್ಣ ಎಲ್ಲಿದ್ದರೂ ಪತ್ತೆ ಮಾಡಿ ಬಂಧಿಸಬೇಕು. ಕಾಲಮಿತಿಯಲ್ಲಿ ಎಸ್ಐಟಿ ತನಿಖೆ ನಡೆಯಬೇಕು ಎನ್ನುವುದು ಸೇರಿದಂತೆ 16 ಬೇಡಿಕೆಗಳನ್ನೊಳಗೊಂಡ ಬಹಿರಂಗ ಪತ್ರಕ್ಕೆ ಹಿರಿಯ ಲೇಖಕರಾದ ಡಾ. ವಿಜಯಾ, ಸಾಹಿತಿ ಡಾ.ಜಿ ರಾಮಕೃಷ್ಣ, ವಸುಂಧರಾ ಭೂಪತಿ, ಮೀನಾಕ್ಷಿ ಬಾಳಿ, ಕೆ ನೀಲಾ, ಕೆ.ಎಸ್ ವಿಮಲಾ, ಕುಂ ವೀರಭದ್ರಪ್ಪ, ಮುಜಫರ್ ಅಸ್ಸಾದಿ ಸೇರಿದಂತೆ ಒಟ್ಟು 107 ಮಂದಿ ಸಹಿ ಮಾಡಿದ್ದು, ‘ಪಜ್ಞಾವಂತ ನಾಗರಿಕರ ಬಹಿರಂಗ ಪತ್ರ’ ಎಂದು ಹೆಸರಿಸಲಾಗಿದೆ.
ಪ್ರಜ್ವಲ್ ರೇವಣ್ಣ ಪ್ರಕರಣವು ಅತ್ಯಂತ ಹೇಯವಾಗಿದ್ದು, ನಾಗರೀಕ ಸಮಾಜ ತಲೆತಗ್ಗಿಸುವಂತಹುದಾಗಿದೆ. 2900 ವಿಡಿಯೋ ಮತ್ತು ಫೋಟೋಗಳ ದಾಖಲೆ ಇಟ್ಟುಕೊಂಡಿರುವುದು, ಸಂತ್ರಸ್ತರು ದೂರು ನೀಡದಂತೆ ಬೆದರಿಸುವುದು, ಅಪಹರಿಸುವುದು, ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿರುವ ಹಗರಣವನ್ನು ಮಾಹಿತಿ ಇರುವ ಯಾರೊಬ್ಬರೂ ಕಾನೂನು ಪಾಲಕರಿಗೆ ತಿಳಿಸದೆ ಮುಚ್ಚಿಟ್ಟಿರುವುದು ಘೋರ ಅಪರಾಧ ಎಂದು ಹೇಳಿದ್ದಾರೆ.
ಈ ಹಗರಣವನ್ನು ರಾಜಕೀಯ ನಾಯಕರು ತಮ್ಮ ಹಿತಾಸಕ್ತಿ ಮತ್ತು ಚುನಾವಣೆಗೆ ಬಳಸುತ್ತಿರುವುದು ಮತ್ತಷ್ಟು ಆಘಾತಕಾರಿಯಾಗಿದೆ. ರಾಜಕೀಯ ಶಕ್ತಿಗಳ ಬೇಜವಾಬ್ದಾರಿ ನಡುವಳಿಕೆಯು ಮೂಲ ಅಪರಾಧ ಮತ್ತು ಅದರಿಂದ ಆಗಲಿರುವ ಪರಿಣಾಮಗಳನ್ನು ಗೌಣ ಮಾಡುತ್ತಿದೆ ಎಂದಿದ್ದಾರೆ.
ಪ್ರಜ್ವಲ್ ರೇವಣ್ಣನ ತಾತ, ತಂದೆ, ತಾಯಿ, ಅಣ್ಣ, ಚಿಕ್ಕಪ್ಪ, ಚಿಕ್ಕಮ್ಮ ಪ್ರಜಾಪ್ರಭುತ್ವದ ಎಲ್ಲ ಹುದ್ದೆಗಳನ್ನು, ಸರ್ಕಾರದ ಎಲ್ಲ ಸವಲತ್ತುಗಳನ್ನು ಬಳಸಿಕೊಳ್ಳುತ್ತಾ ಬಂದಿದ್ದಾರೆ. ಕುಟುಂಬಸ್ಥರು ಪ್ರಜಾಪ್ರಭುತ್ವದ ಮುಸುಕಿನೊಳಗೆ, ಪ್ರಜಾಪ್ರತಿನಿಧಿಗಳೆಂಬ ಧಿರಿಸು ಧರಿಸಿ ನಡೆಸಿರುವ ಪಾಳೇಗಾರಿಕೆಯ ಆಡಳಿತ ನಡೆಸುತ್ತಾ ಬಂದಿದ್ದಾರೆ.
ಈ ಹಗರಣ ಬಯಲಾದರೂ ಹಾಸನ ಚುನಾವಣೆ ಸ್ಥಗಿತಗೊಳಿಸದೆ, ಆರೋಪಿಯನ್ನು ಚುನಾವಣೆಗೆ ಸ್ಪರ್ಧೆ ಮಾಡಲು ಬಿಟ್ಟಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಚಾರ. ಹಗರಣ ಬಯಲಾಗಿ ಏ.22 ರಿಂ 26ರ ವರೆಗೆ ಆರೋಪಿಯನ್ನು ಬಂಧಿಸಿಲ್ಲ. ಇದು ಮಹಿಳೆಯರ ಸುರಕ್ಷತೆ ಬಗ್ಗೆ ಪ್ರಶ್ನೆ ಮೂಡಿಸಿದೆ ಎಂದಿದ್ದರೆ.
ಸಾಹಿತಿಗಳ, ಬರಹಗಾರರು ಒಟ್ಟು 16 ಬೇಡಿಕೆಗಳನ್ನು ಮುಂದಿಟ್ಟಿದ್ದರು. ಇದರಲ್ಲಿ ಕೆಲ ಬೇಡಿಕೆಗಳು ಇನ್ನೂ ಈಡೇರಿಲ್ಲ. ಹಾಗಾದರೆ ಸಾಹಿತಿಗಳು, ಬರಹಗಾರರು ಮುಂದಿಟ್ಟಿದ್ದ 16 ಬೇಡಿಕೆಗಳು ಯಾವುವು? ಇಲ್ಲಿದೆ ನೋಡಿ.
– ಪ್ರಜ್ವಲ್ ರೇವಣ್ಣ ಎಲ್ಲಿದ್ದರೂ ಪತ್ತೆ ಮಾಡಿ ಬಂಧಿಸಬೇಕು.
– ಸಂತ್ರಸ್ತ ಮಹಿಳೆಯರಿಗೆ ಧೈರ್ಯ ತುಂಬಿ, ದೂರು ನೀಡುವ ವಾತಾವರಣ ನಿರ್ಮಾಣ ಮಾಡಬೇಕು.
– ಹಗರಣದ ಆರೋಪ – ಪ್ರತ್ಯಾರೋಪದಲ್ಲಿ ತೊಡಗಿರುವ ರಾಜಕೀಯ ನಾಯಕರ ನಡವಳಿಕೆಗೆ ಕಡಿವಾಣ ಹಾಕಬೇಕು.
– ಎಸ್ಐಟಿ ತನಿಖೆ ಕಾಲಮಿತಿಯಲ್ಲಿ ನಡೆಯಬೇಕು.
– ಲೈಂಗಿಕ ಕೃತ್ಯ ಚಿತ್ರೀಕರಣದಲ್ಲಿ ಭಾಗಿಯಾದವರನ್ನು ಪತ್ತೆ ಮಾಡಿ ಮೊಕದ್ದಮೆ ಹೂಡಬೇಕು.
– ಕಾರು ಚಾಲಕ ಕಾರ್ತಿಕ್ನನ್ನು ಕೂಡಲೇ ಬಂಧಿಸಬೇಕು.
– ವಿಡಿಯೋ ತಮ್ಮ ಬಳಿ ಇದೆ ಎಂದ ಹೇಳಿದ ರಾಜಕೀಯ ನಾಯಕ ಮತ್ತು ಕಾರು ಚಾಲಕ ಕಾರ್ತಿಕ್ ಗೌಡ ವಿರುದ್ಧ ಸಂಚು ರೂಪಿಸಿದ್ದಕ್ಕೆ ಸೂಕ್ತ ಕಾನೂನುಗಳ ಅಡಿಯಲ್ಲಿ ಮೊಕದ್ದಮೆ ಹೂಡಬೇಕು.
– ವಿಡಿಯೋಗಳನ್ನು ಹಂಚಿದವರ ವಿರುದ್ಧ ಮಾನವ ಹಕ್ಕುಗಳಿಗೆ ಧಕ್ಕೆ, ಎಲೆಕ್ಷನ್ ಸ್ಯಾಬೊಟೇಜ್ ಮಾಡಲು ಸಂಚು ಮಾಡಿರುವ ಆರೋಪಗಳ ಮೇಲೆ ಕೇಸ್ ದಾಖಲಿಸಬೇಕು.
– ವಿಡಿಯೋ ಕುರಿತು ಮಾಹಿತಿ ಇದ್ದರೂ ಪೊಲೀಸರಿಗೆ ಮಾಹಿತಿ ನೀಡಿಲ್ಲದ ಕಾರಣ ಅವರನ್ನು ಸಂಚಿನ ಭಾಗ ಎಂದು ಪರಿಗಣಿಸಬೇಕು.
– ವಿಡಿಯೋ ಹಳೆಯದು ಎಂದು ಎಚ್ಡಿ ರೇವಣ್ಣ ಹೇಳಿದ್ದಾರೆ. ಅಷ್ಟು ವರ್ಷ ನಡೆಯುತ್ತಿರುವ ಲೈಂಗಿಕ ವಿಕೃತಿ ಮುಂದುವರೆಯಲು ಬಿಟ್ಟಿರುವ ಕುಟುಂಬ ಸದಸ್ಯರ ವಿರುದ್ಧವೂ ಮೊಕದ್ಧಮೆ ಹೂಡಬೇಕು.
– ಆರೋಪಿ ದೇಶ ಬಿಟ್ಟು ಹೋಗಲು ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು.
– ಪ್ರಜ್ವಲ್ ರೇವಣ್ಣ ಹುಳುಕುಗಳನ್ನು ಮುಚ್ಚಿಟ್ಟುಕೊಳ್ಳಲು ಪಡೆದ ಈ ತಡೆಯಾಜ್ಞೆಯಿಂದ ಜನರ ಹಕ್ಕಿನ ಉಲ್ಲಂಘನೆಯಾಗಿದ್ದು ಜನರ ಹಕ್ಕುಗಳ ಸಂರಕ್ಷಕನಾಗಿರುವ (ಕಸ್ಟೋಡಿಯನ್) ರಾಜ್ಯ ಸರ್ಕಾರವು ಈ ಕುರಿತು ಮೊಕದ್ದಮೆ ದಾಖಲಿಸಬೇಕು.
– ಹೆಚ್ ಡಿ ರೇವಣ್ಣ, ಪ್ರಜ್ವಲ್ ರೇವಣ್ಣ ಅವರ ಶಿಫಾರಸ್ಸಿನ ಮೇರೆಗೆ ಹಾಸನ ಜಿಲ್ಲೆಯ ವಿವಿಧ ಕಚೇರಿಗಳಲ್ಲಿ ನೇಮಕಗೊಂಡಿರುವ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು.
– ಎಸ್ಐಟಿ ತನಿಖೆ ಪೂರ್ಣಗೊಳ್ಳುವವರೆಗೆ ಹೆಚ್ ಡಿ ರೇವಣ್ಣ ಅವರ ವಿಧಾನಸಭೆ ಸದಸ್ಯತ್ವವನ್ನು ತಾತ್ಕಾಲಿಕವಾಗಿ ರದ್ದುಪಡಿಸಬೇಕು.
– ಈ ಆರೋಪಿಗಳ ನಡೆಯು ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಕೃತ್ಯವಾಗಿದೆ. ಸರ್ಕಾರಿ ಬಂಗ್ಲೆಯನ್ನು ಅಪರಾಧ ಕೃತ್ಯಕ್ಕೆ ಬಳಸಿರುವುದಕ್ಕೆ ಮೊಕದ್ದಮೆ ಹೂಡಬೇಕು.
– ಈ ಕುಟುಂಬಕ್ಕೆ ಒದಗಿಸಲಾಗಿರುವ ಎಲ್ಲ ಸರ್ಕಾರಿ ಸವಲತ್ತುಗಳನ್ನು ಈ ಕೂಡಲೇ ಹಿಂದಕ್ಕೆ ಪಡೆಯಬೇಕು ಎಂಬ ಬೇಡಿಕೆಗಳುಳ್ಳ ಪತ್ರವನ್ನು ಬರೆದಿದ್ದರು.