ಸುಳ್ಳು ಮಾಹಿತಿ ನೀಡಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕಾರ್ಡ್ಗಳನ್ನು ಪಡೆದಿರುವ ಸರ್ಕಾರಿ ನೌಕರರು, ಭೂಮಾಲೀಕರು ಮತ್ತು ಎರಡು ಕಾರುಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ.
ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ, ಐಟಿ ರಿಟರ್ನ್ಸ್ ಸಲ್ಲಿಸುವ ಅನೇಕರು ಬಿಪಿಎಲ್ ಕಾರ್ಡ್ಗಳನ್ನು ಹೊಂದಿರುವುದರಿಂದ ಬಿಪಿಎಲ್ ಕಾರ್ಡ್ಗಳ ಪರಿಶೀಲನೆ ನಡೆಸಲಾಗುತ್ತಿದೆ. ಸರ್ಕಾರಿ ನೌಕರರು, ಮೂರು ಹೆಕ್ಟೇರ್ಗಿಂತ ಹೆಚ್ಚು ಜಮೀನು ಹೊಂದಿರುವವರು ಮತ್ತು ಎರಡು ಕಾರು ಹೊಂದಿರುವವರು ಬಿಪಿಎಲ್ ಕಾರ್ಡ್ಗಳನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸುಳ್ಳು ಮಾಹಿತಿ ನೀಡಿ ಪಡೆದಿರುವ ಬಿಪಿಎಲ್ ಕಾರ್ಡ್ ಗಳನ್ನು ಸರಕಾರ ಹಿಂಪಡೆಯುತ್ತಿದೆ ಎಂದರು.
ಜನರು ತಮ್ಮ ಕಾರ್ಡ್ಗಳನ್ನು ಹಿಂದಿರುಗಿಸಲು ಅಥವಾ ಅದನ್ನು ರದ್ದುಗೊಳಿಸಲು ಸ್ವಯಂ ಪ್ರೇರಿತರಾಗಿ ಮುಂದೆ ಬರಬೇಕು. ಇಲ್ಲದಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಬಿಪಿಎಲ್ ಕಾರ್ಡ್ ಪಡೆಯಲು ಸುಳ್ಳು ಹೇಳಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈಗ ಜಿಲ್ಲಾ ಮಟ್ಟದಲ್ಲಿ ಪರಿಶೀಲನೆ ನಡೆಸಲಾಗುವುದು” ಎಂದು ಪರಮೇಶ್ವರ ತಿಳಿಸಿದರು.
ಅನರ್ಹ ವ್ಯಕ್ತಿಗಳಿಗೆ ನೀಡಲಾದ ಕಾರ್ಡ್ಗಳನ್ನು ಹಿಂಪಡೆಯಲು ನಾವು ಪರಿಶೀಲಿಸುತ್ತಿದ್ದೇವೆ. ಸದ್ಯ ಆಹಾರ ಇಲಾಖೆ ಈ ಪ್ರಕರಣಗಳ ಪರಿಶೀಲನೆ ನಡೆಸುತ್ತಿದ್ದು, ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಅನರ್ಹ ವ್ಯಕ್ತಿಗಳು ಕಾರ್ಡ್ಗಳನ್ನು ಉಳಿಸಿಕೊಳ್ಳುವುದಿಲ್ಲ. ಆದರೆ, ಅರ್ಹ ಫಲಾನುಭವಿಗಳಿಗೆ ಅವರ ಅರ್ಹತೆಗಳನ್ನು ನಿರಾಕರಿಸಲಾಗುವುದಿಲ್ಲ” ಎಂದರು.