ಮಂಗಳೂರು ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಪರೀಕ್ಷೆ ಮತ್ತು ಪ್ರವೇಶ ಶುಲ್ಕವನ್ನು ಏಕಾಏಕಿ ಶೇ. 50-60ರಷ್ಟು ಏರಿಸಿದ್ದನ್ನು ವಿರೋಧಿಸಿ ಎಬಿವಿಪಿ ವತಿಯಿಂದ ಕೊಣಾಜೆಯಲ್ಲಿರುವ ಮಂಗಳೂರು ವಿವಿಯ ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾನಿರತ ವಿದ್ಯಾರ್ಥಿಗಳು ಪೊಲೀಸರ ಬ್ಯಾರಿಕೇಡ್ ತಳ್ಳಿ ಒಳನುಗ್ಗಿ ಆಡಳಿತ ಸೌಧ ಕಟ್ಟಡದ ಮುಂಭಾಗದ ಗಾಜನ್ನು ಪುಡಿಗೈದು ಆಕ್ರೋಶ ವ್ಯಕ್ತಪಡಿಸಿದರು. ಈ ನಡುವೆ ವಿದ್ಯಾರ್ಥಿಯೊಬ್ಬನ ಕೈಗೆ ಗಾಜು ತಾಗಿ ಗಾಯಗೊಂಡ ಘಟನೆಯೂ ನಡೆಯಿತು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕುಲಪತಿ ಪ್ರೊ.ಪಿ.ಎಲ್. ಧರ್ಮ, ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಲು ಯತ್ನಿಸಿದರು. ಪ್ರತಿಭಟನೆ ಮಾಡೋದು ವಿದ್ಯಾರ್ಥಿಗಳ ಹಕ್ಕು. ಹಾಗೆಂದು ಸಾರ್ವಜನಿಕ ಆಸ್ತಿಗೆ ಹಾನಿ ಮಾಡೋದು, ಗಾಜು ಪುಡಿ ಮಾಡೋದು ಒಳ್ಳೆಯದಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಶೀಘ್ರ ಸಮಸ್ಯೆಯನ್ನು ಪರಿಹರಿಸುತ್ತೇನೆ ಎಂದು 3 ಹೇಳಿದರೂ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಕುಲಪತಿ ಸರ್ಕಾರದಿಂದ ದಿನನಿತ್ಯದ ಖರ್ಚಿಗೆ ಒಂದು ರೂಪಾಯಿ ಕೂಡ ಬರುತ್ತಿಲ್ಲ. ವಿದ್ಯಾರ್ಥಿಗಳ ಶುಲ್ಕದಿಂದಲೇ ಎಲ್ಲವನ್ನು ಭರಿಸುವ ಅನಿವಾರ್ಯತೆ ಇದೆ. ಆಂತರಿಕ ಸಂಪನ್ಮೂಲ ಹೆಚ್ಚಿಸಿಕೊಳ್ಳಲು ಸರಕಾರ ಸೂಚಿಸಿದೆ. ಆದುದರಿಂದ ಅನಿವಾರ್ಯವಾಗಿ ಶುಲ್ಕ ಹೆಚ್ಚಿಸಿದ್ದೇವೆ. ಆದರೂ ಸರ್ಕಾರ ಹೇಳಿರುವುದಕ್ಕಿಂತ ಕಡಿಮೆ ಶುಲ್ಕ ತೆಗೆದುಕೊಳ್ಳುತ್ತಿದ್ದೇವೆ. 6 ವರ್ಷಗಳ ಬಳಿಕ ಶುಲ್ಕ ಹೆಚ್ಚಳ ಮಾಡಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಗ್ರೇಡ್ ಮೂಲಕ ವರ್ಕ್ ನೀಡಬೇಕಾಗುತ್ತೆ. ಹೀಗಾಗಿ ಸರಿ ಮಾಡಲು ಸರ್ಕಾರವನ್ನು ಕೇಳಿಕೊಂಡಿದ್ದೇವೆ. ಸರ್ಕಾರ ಇಲ್ಲಿಯವರೆಗೂ ಸರಿಪಡಿಸಿಲ್ಲ ಎಂದು ಅಸಹಾಯಕತೆ ತೋರಿದರು.
ವಿವಿ ಕುಲಪತಿ ಪಿ.ಎಲ್.ಧರ್ಮ ಸಮಜಾಯಿಷಿಗೆ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದು ಒಂದು ಹಂತದಲ್ಲಿ ಇಡೀ ದಿನ ಪ್ರತಿಭಟನೆ ನಡೆಸೋದಾಗಿ ಎಚ್ಚರಿಕೆ ನೀಡಿದ್ದಾರೆ. ಪೊಲೀಸರ ಸಮಾಧಾನಕ್ಕೂ ಬಗ್ಗದೆ ಮತ್ತೆ ಧಿಕ್ಕಾರದ ಘೋಷಣೆ ಹಾಕಿದ್ದಾರೆ. ಏಕಾಏಕಿ 50-60 ಪರ್ಸೆಂಟ್ ಶುಲ್ಕ ಏರಿಸಿದ್ದೀರಿ, ಪರೀಕ್ಷಾ ಶುಲ್ಕ ಡಬಲ್ ಮಾಡಿದ್ದೀರಿ. ಕೇಳಿದರೆ ಖಾಸಗಿ ಯುನಿವರ್ಸಿಟಿ ಹೇಳೀರಿ, ಅಲ್ಲಿ ಫೀಸ್ ಜಾಸ್ತಿ ಇದೆ ಎಂದು ಇಲ್ಲಿಗೆ ಬರೋದಲ್ವಾ? ನಿಮಗೆ ಸರ್ಕಾರದ ಫಂಡ್ ಇಲ್ಲಾಂತ ವಿದ್ಯಾರ್ಥಿಗಳನ್ನು ಸುಲಿಗೆ ಮಾಡ್ತಿದೀರಾ.ಕೇಳಿದರೆ ಖಾಸಗಿ ಯುನಿವರ್ಸಿಟಿ ಹೇಳೀರಿ, ಅಲ್ಲಿ ಫೀಸ್ ಜಾಸ್ತಿ ಇದೆ ಎಂದು ಇಲ್ಲಿಗೆ ಬರೋದಲ್ವಾ? ನಿಮಗೆ ಸರ್ಕಾರದ ಫಂಡ್ ಇಲ್ಲಾಂತ ವಿದ್ಯಾರ್ಥಿಗಳನ್ನು ಸುಲಿಗೆ ಮಾಡ್ತಿದೀರಾ.. ಕಳೆದ ಸಾಲಿನ ಪರೀಕ್ಷೆ ಮುಗಿದು ಫಲಿತಾಂಶ ಬಂದು ಆರು ತಿಂಗಳಾದರೂ ಅಂಕಪಟ್ಟಿ ಕೊಡುತ್ತಿಲ್ಲ. ಸಿಬ್ಬಂದಿ, ಶಿಕ್ಷಕರಲ್ಲಿ ಕೇಳಿದರೆ ಗೊತ್ತಿಲ್ಲ ಅಂತಾರೆ, ಹಾಗಾಗಿ ಮಂಗಳೂರು ವಿವಿ ವ್ಯವಸ್ಥೆಯನ್ನು ಪ್ರಶ್ನೆ ಮಾಡುತ್ತಿದ್ದೇವೆ ಎಂದು ವಿದ್ಯಾರ್ಥಿ ಮುಖಂಡರು ನುಡಿದರು.
ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರ ಕೊಡಲು ಕುಲಪತಿ ಧರ್ಮ ಅಸಾಹಯಕರಾದರು. ಸಂಜೆಯೊಳಗೆ ಸಮಸ್ಯೆ ಬಗೆಹರಿಸದೇ ಇದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.
ಇದೇ ವೇಳೆ, ಸಿಂಡಿಕೇಟ್ ಸದಸ್ಯರು ಮತ್ತು ಕುಲಪತಿ ಧರ್ಮ ತುರ್ತಾಗಿ ತಮ್ಮ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ. ಕೆಲಹೊತ್ತಿನ ಬಳಿಕ ಸಿಂಡಿಕೇಟ್ ಸದಸ್ಯರ ಜೊತೆಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಪ್ರೊ.ಧರ್ಮ, ನಾಳೆಯೇ ವಿವಿಯ ರಿಜಿಸ್ಟ್ರಾರ್ ಅವರನ್ನು ಬೆಂಗಳೂರಿಗೆ ಕಳುಹಿಸಿಕೊಡುತ್ತೇವೆ. ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು. ವಿ.ಸಿ ಭರವಸೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಿಲ್ಲಿಸಿದ್ದಾರೆ.