ಪುತ್ತೂರು: ಅಸಹಾಯಕರಿಗೆ ಮಾಡುವ ಅಗತ್ಯ ಸೇವೆಯೇ ಮಾನವ ಧರ್ಮ ಹಾಗೂ ಅದೇ ಜೀವನದ ಸಾರ್ಥಕತೆ ಕೂಡ ಎಂದು ನರಿಮೊಗರು ಸರಸ್ವತಿ ವಿದ್ಯಾ ಮಂದಿರದ ಸಂಚಾಲಕ ಅವಿನಾಶ್ ಕೊಡೆಂಕಿರಿ ಹೇಳಿದರು.
ಯೋಗ ಕೇಂದ್ರ ಪುತ್ತೂರು, ಪ್ರಗತಿ ವಿದ್ಯಾಕೇಂದ್ರ ಕಾಣಿಯೂರು, ಅನಿಕೇತನ ಎಜುಕೇಶನಲ್ ಟ್ರಸ್ಟ್ ಪುತ್ತೂರು, ಪ್ರಶಾಂತಿ ಸದ್ಭಾವನಾ ಟ್ರಸ್ಟ್ ಪುತ್ತೂರು ಇವರ ಸಹಯೋಗದಲ್ಲಿ ಬನ್ನೂರು ಶ್ರೀ ಶಿವ ಪಾರ್ವತಿ ಸಭಾ ಮಂದಿರದಲ್ಲಿ ನಡೆದ 10ನೇ ಯೋಗ – ಸತ್ಸಂಗದಲ್ಲಿ ಸನ್ಮಾನ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ಪುತ್ತೂರು ಯೋಗ ಕೇಂದ್ರದ ಅಧ್ಯಕ್ಷ, ಹಿರಿಯ ವಕೀಲ ಗಿರೀಶ್ ಮಳಿ ಮಾತನಾಡಿ, ಧಾವಂತದ ಬದುಕಿನಲ್ಲಿ ಉತ್ತಮ ಜೀವನ ಶೈಲಿ ರೂಪಿಸಿಕೊಳ್ಳಲು ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಮತ್ತು ಉತ್ತಮ ವಿಚಾರಧಾರೆಗಳ ಅವಶ್ಯಕ. ಅವುಗಳಿಗೆ ಪೂರಕವಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಸನ್ಮಾನ:
ವಿಟ್ಲ ಸಮೀಪ ಉಂಟಾಗಿದ್ದ ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ವಯೋ ವೃದ್ಧರನ್ನು ತಮ್ಮ ಜೀವದ ಹಂಗು ತೊರೆದು ಕಾಪಾಡಿದ್ದ ಯುವ ನ್ಯಾಯವಾದಿ ಅಶೋಕ್ ಸಿ.ಎಚ್ ಮತ್ತು ಇಲೆಕ್ಟ್ರೀಷಿಯನ್ ಸುರೇಶ್ ಸಿ.ಎಚ್ ಅವರನ್ನು ಸನ್ಮಾನಿಸಲಾಯಿತು.
ಪ್ರಗತಿ ವಿದ್ಯಾಕೇಂದ್ರದ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಅನಿಕೇತನ ಎಜುಕೇಶನಲ್ ಟ್ರಸ್ಟ್ ನ ಮುಖ್ಯಸ್ಥ ವಕೀಲರಾದ ಕೃಷ್ಣ ಪ್ರಸಾದ್ ನಡ್ಸಾರ್, ಯೋಗ ಗುರು ಪ್ರಸಾದ್ ಪಾಣಾಜೆ ಮತ್ತಿತರರು ಉಪಸ್ಥಿತರಿದ್ದರು.
ಸತ್ಸಂಗ ಕಾರ್ಯಕ್ರಮದಲ್ಲಿ ಸಂಸ್ಕ್ರತ ಉಪನ್ಯಾಸಕ ಪರೀಕ್ಷಿತ್ ತೋಳ್ಪಾಡಿ ಅವರು ವಿಷ್ಣು ಸಹಸ್ರನಾಮ ಪಠಣವನ್ನು ನಡೆಸಿಕೊಟ್ಟರು.
ಸ್ವಾಮಿ ವಿವೇಕಾನಂದರ ಏಕಮಾತ್ರ ಬರಹವಾದ ರಾಜಯೋಗ ಎಂಬ ಗ್ರಂಥದ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಅವಿನಾಶ್ ಕೊಡೆಂಕಿರಿ ನಡೆಸಿಕೊಟ್ಟರು.
ಯೋಗ ಗುರು ಪ್ರಸಾದ್ ಪಾಣಾಜೆ ಸ್ವಾಗತಿಸಿ, ಯೋಗ ಕೇಂದ್ರದ ಖಜಾಂಚಿ ಹರಿಕೃಷ್ಣ ವಂದಿಸಿದರು. ಜ್ಯೋತಿ ಇಲೆಕ್ಟ್ರಿಕಲ್ಸ್ ನ ಸುಂದರ ಮತ್ತು ರಾಣಿ ದಂಪತಿ ಕಾರ್ಯಕ್ರಮ ಆಯೋಜಿಸಿದ್ದರು.