ಗಣೇಶ್ ಎನ್. ಕಲ್ಲರ್ಪೆ
ಸಂಪ್ಯ: ಕುದುರೆಗಳಿಗೆ ನೀರು ಕುಡಿಯಲೆಂದು ಅಗೆದಿದ್ದ ಐತಿಹಾಸಿಕ ಕೆರೆ, ಗಣಪತಿ – ನವದುರ್ಗೆಯರನ್ನು ವಿಸರ್ಜನೆ ಮಾಡುತ್ತಿರುವ ಧಾರ್ಮಿಕ ಹಿನ್ನೆಲೆಯ ಕೆರೆ ಇಂದು ಜೀವಗಳನ್ನು ಬಲಿ ತೆಗೆದುಕೊಳ್ಳಲೆಂದೇ ಬಾಯ್ದೆರೆದು ನಿಂತಂತೆ ಭಾಸವಾಗುತ್ತಿದೆ.
ಇದು ಸಂಪ್ಯದ ಕೆರೆಯ ಕಥೆ. ಇತ್ತೀಚೆಗಷ್ಟೇ ರಿಕ್ಷಾ ಚಾಲಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಸರ್ವಋತು ಕೆರೆಯ ದಾರುಣ ಸ್ಥಿತಿಯಿದು.
ರಿಕ್ಷಾ ಚಾಲಕ ಆತ್ಮಹತ್ಯೆಯನ್ನೇ ಮಾಡಿಕೊಂಡಿರಬಹುದು. ಆದರೆ ಕೆರೆಯ ಸ್ಥಿತಿ ನೋಡುವಾಗ, ಆತ್ಮಹತ್ಯೆ ಮಾಡಿಕೊಳ್ಳಲೆಂದೇ ಕೆರೆ ಕಾಯುತ್ತಿರುವಂತಿದೆ. ನಿರ್ವಹಣೆ ಇಲ್ಲದ ಕೆರೆಯ ಪರಿಸ್ಥಿತಿ ಹಾಗಿದೆ.
ಮಾಣಿ – ಮೈಸೂರು ಹೆದ್ದಾರಿಯ ಸಂಪ್ಯದಿಂದ 50 ಮೀಟರ್ ದೂರದಲ್ಲೇ ಇರುವ ಕೆರೆ ಅಪಾಯ ಆಹ್ವಾನಿಸುತ್ತಿದೆ. ಸಂಪ್ಯ ಹೆದ್ದಾರಿಯಿಂದ ಕೆಳಗಿಳಿದು ಬಂದಾಗ ಧಸಕ್ಕನೆ ಎದೆ ಛಲ್ಲೆನಿಸುವಂತೆ ಎದುರಿಗೆ ನಿಲ್ಲುತ್ತದೆ ಕೆರೆ. ಕೆರೆ ಹಾಗೂ ರಸ್ತೆಯ ನಡುವೆ ಒಂದು ಬೇಲಿಯೂ ಇಲ್ಲ. ಪರಿಸರದ ಮಂದಿ ತಮ್ಮ ವಾಹನವನ್ನು ಟರ್ನ್ ಮಾಡಿ, ರಸ್ತೆಯಲ್ಲಿ ಸಂಚರಿಸಬಹುದು. ಆದರೆ ಮೊದಲ ಬಾರಿ ಬರುವವರ ಹೃದಯ ಒಂದು ಬಾರಿ ಬಾಯಿಗೆ ಬಂದಿರುತ್ತದೆ.
ಮರದೊಂದಿಗೆ ಕೆರೆಗೆ ಬಿದ್ದ ತಡೆಗೋಡೆ:
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನ ಮಂತ್ರಿಯವರ ಅಮೃತ ಸರೋವರ ಅಭಿಯಾನದಡಿ ಆರ್ಯಾಪು ಗ್ರಾಮ ಪಂಚಾಯತ್ ಕೆಲ ವರ್ಷಗಳ ಹಿಂದೆ ಕೆರೆಯನ್ನು ಪುನಶ್ಚೇತನ ಮಾಡಿಸಿತ್ತು. ಬಳಿಕ ಕೆರೆ ಬದಿಯಲ್ಲಿ ಬೆಳೆದಿದ್ದ ಮರವೊಂದು, ಬುಡ ಸಹಿತ ಕೆರೆಗೆ ಬೀಳುವಾಗ ಆವರಣ ಗೋಡೆಯೂ ಕೆರೆಯ ಒಡಲನ್ನು ಸೇರಿತು. ಕೆರೆಯ ಇನ್ನೊಂದು ಬದಿಯಲ್ಲಿ ತಡೆಗೋಡೆ ಇದ್ದರೂ, ಎಲ್ಲಿ ಅಗತ್ಯವೋ ಅಲ್ಲಿ ತಡೆಗೋಡೆ ಇಲ್ಲ ಎನ್ನುವುದೇ ಕಳವಳದ ಸಂಗತಿ.
ಬೀದಿ ದೀಪವೂ ಇಲ್ಲ:
ಈ ಕೆರೆ ಅಪಾಯ ಆಹ್ವಾನಿಸುತ್ತಿರುವ ಪ್ರದೇಶದಲ್ಲಿ ಒಂದು ಬೀದಿದೀಪವೂ ಇಲ್ಲ ಎನ್ನುವುದು ಸೋಜಿಗದ ಸಂಗತಿ. ರಸ್ತೆಯಲ್ಲಿ ಬರುವವರು ನೇರವಾಗಿ ಕೆರೆಯ ಬಳಿ ಬಂದು, ಬಳಿಕ ಟರ್ನ್ ತೆಗೆದುಕೊಳ್ಳಬೇಕು. ಆದರೆ ಮೊದಲ ಬಾರಿ ಬರುವವರು ಅದರಲ್ಲೂ ರಾತ್ರಿ ಬರುವವರಿಗೆ ಇದರ ಅರಿವು ಇರಲು ಸಾಧ್ಯವೇ ಇಲ್ಲ. ಹಾಗಾಗಿ ಅವರು ನೇರವಾಗಿ ಕೆರೆಯ ನೀರಿಗೆ ಬೀಳುವುದು ನಿಶ್ಚಿತ. ಒಂದು ಬೀದಿದೀಪವಾದರೂ ಇದ್ದರೆ, ಅಪಾಯದ ಅರಿವು ಆಗುತ್ತದೆ ಎನ್ನುವುದು ಸ್ಥಳೀಯರ ಅಭಿಮತ.
ಚೌತಿಗೆ ಮೊದಲು ಶುಚಿಗೊಳಿಸಿ:
ಇನ್ನೇನು ಕೆಲವೇ ದಿನಗಳಲ್ಲಿ ಗಣೇಶ ಚತುರ್ಥಿ ಆಗಮಿಸುತ್ತದೆ. ಈ ಹಿಂದಿನ ವರ್ಷಗಳಲ್ಲಿ ವಿವಿಧೆಡೆ ಪೂಜಿಸಲ್ಪಟ್ಟ ಗಣೇಶ ಮೂರ್ತಿಗಳನ್ನು ಈ ಕೆರೆಯಲ್ಲಿ ವಿಸರ್ಜಿಸಲಾಗುತ್ತಿತ್ತು. ಹಾಗಾಗಿ, ಚೌತಿಗೆ ಮೊದಲು ಕೆರೆಯ ಸುತ್ತ ಬೆಳೆದು ನಿಂತಿರುವ ಪೊದೆಗಳನ್ನು ತೆಗೆದು, ಕೆರೆಯನ್ನು ಶುಚಿಗೊಳಿಸಬೇಕು. ಕೆರೆಯ ಸುತ್ತ ಕನಿಷ್ಠ ಒಂದು ಬೇಲಿಯನ್ನಾದರೂ ಹಾಕಬೇಕು ಎನ್ನುವ ಆಗ್ರಹ ಸ್ಥಳೀಯರಿಂದ ವ್ಯಕ್ತವಾಗಿದೆ.
ಅನುದಾನದ ನಿರೀಕ್ಷೆಯಲ್ಲಿ: ಪಿಡಿಓ ನಾಗೇಶ್
ಶಶಿಪ್ರಭಾ ಅವರು ತಾ.ಪಂ. ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಕೆರೆಯನ್ನು ಪುನಶ್ಚೇತನ ಮಾಡಲಾಗಿತ್ತು. ಕೆರೆಯ ಬಳಿಯಲ್ಲೇ ಇದ್ದ ಮರವೊಂದು ಬೀಳುವಾಗ, ಕೆರೆಯ ತಡೆಗೋಡೆಯೂ ಕುಸಿದು ಕೆರೆಗೆ ಕುಸಿದು ಬಿತ್ತು. ತಡೆಗೋಡೆ ಕುಸಿಯದಂತೆ ಮರವನ್ನು ತೆರವು ಮಾಡಲು ಪ್ರಯತ್ನಿಸಲಾಗಿತ್ತು. ಆದರೆ ಸಾಧ್ಯವಾಗಿರಲಿಲ್ಲ. ಸದ್ಯ ತುರ್ತು ಕೆಲಸಗಳು ನಡೆಯುವ ಅವಶ್ಯಕತೆ ಇದೆ. ಆದರೆ ಗ್ರಾಮ ಪಂಚಾಯತ್’ನಲ್ಲಿ ಅನುದಾನವಿಲ್ಲ. ಬೇರೆ ಇಲಾಖೆಯ ಅನುದಾನವನ್ನು ತರಿಸಿಕೊಳ್ಳುವ ಬಗ್ಗೆ ಚಿಂತನೆ ಇದೆ.
ನಾಗೇಶ್, ಪಿಡಿಓ, ಆರ್ಯಾಪು ಗ್ರಾಮ ಪಂಚಾಯತ್