ಪುತ್ತೂರು: ಗುಡ್ಡ ಜರಿದ ತೆಂಕಿಲ ಬೈಪಾಸ್ ರಸ್ತೆಯಲ್ಲಿ ಕೊನೆ ಹಂತದ ಕಾರ್ಯಾಚರಣೆ ನಡೆಯುತ್ತಿದ್ದು, ಸಂಚಾರಕ್ಕೆ ತೆರೆದುಕೊಂಡಿದೆ.
ಈಗಾಗಲೇ ರಸ್ತೆಗೆ ಬಿದ್ದ ಮಣ್ಣನ್ನು ತೆರವು ಮಾಡಲಾಗಿದೆ. ಯಂತ್ರ ಬಳಸಿ ರಸ್ತೆಯಲ್ಲಿದ್ದ ಮಣ್ಣನ್ನು ತೆಗೆಯಲಾಯಿತು. ಮತ್ತೂ ಉಳಿದ ಮಣ್ಣನ್ನು ನೀರು ಹಾಯಿಸಿ ತೆಗೆಯುವ ಕಾರ್ಯ ಅಂತಿಮ ಹಂತದಲ್ಲದೆ. ಮಣ್ಣು ರಸ್ತೆಯಲ್ಲಿ ಹಾಗೇ ಉಳಿದರೆ, ಅಪಘಾತ ಸಂಭವಿಸುವ ಅಪಾಯವೇ ಹೆಚ್ಚು.
ಟ್ರಾಫಿಕ್ ಪೊಲೀಸರು ಬೈಪಾಸ್ ಪ್ರವೇಶಿಸುವ ಮಂಜಲ್ಪಡ್ಪು ಹಾಗೂ ದರ್ಬೆಯಲ್ಲಿ ಬ್ಯಾರಿಕೇಡ್ ಹಾಕಿದ್ದಾರೆ. ಅಲ್ಲದೇ, ಗುಡ್ಡ ಕುಸಿದಿರುವ ತೆಂಕಿಲ ಬಳಿಯೂ ಬ್ಯಾರಿಕೇಡ್ ಹಾಕಿ, ಸಂಚಾರ ನಿಯಂತ್ರಿಸುತ್ತಿದ್ದಾರೆ. ಟ್ರಾಫಿಕ್ ಎಸ್ಸೈ ಉದಯರವಿ ಅವರು ಘಟನಾ ಸ್ಥಳದಲ್ಲಿ ಖುದ್ದು ಹಾಜರಿದ್ದು, ಅವಶ್ಯ ಕಾಮಗಾರಿಗಳಿಗೆ ನಿರ್ದೇಶನ ನೀಡುತ್ತಿದ್ದಾರೆ. ಈಗಾಗಲೇ ಸಹಾಯಕ ಆಯುಕ್ತರು ಸ್ಥಳ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಸಂಚಾರಕ್ಕೆ ಮುಕ್ತ
ಇನ್ನೇನು ಕೆಲವೇ ಗಂಟೆಯಲ್ಲಿ ಬೈಪಾಸ್ ರಸ್ತೆ ಸಂಚಾರಕ್ಕೆ ತೆರೆದುಕೊಂಡಿದೆ. ಆದರೆ ಗುಡ್ಡ ಜರಿಯುವ ಘಟನೆ ಮತ್ತೊಮ್ಮೆ ಸಂಭವಿಸಿದರೂ ಆಶ್ಚರ್ಯ ಪಡಬೇಕಾಗಿಲ್ಲ. ಆದ್ದರಿಂದ ರಸ್ತೆಯ ಒಂದು ಬದಿಯಿಂದ ಮಾತ್ರ ವಾಹನಗಳನ್ನು ಬಿಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.