ಬೆಂಗಳೂರು; ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕಳೆದ 12 ದಿನಗಳಿಂದ ಪೊಲೀಸರಿಂದ ಸತತ ವಿಚಾರಣೆ ಎದುರಿಸಿದ್ದ ನಟ ದರ್ಶನ್ ತೂಗುದೀಪ ಹಾಗೂ ಅವರ ನಾಲ್ವರು ಸಹಚರರು ಶನಿವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರುವುದು ಬಹುತೇಕ ಖಚಿತವಾಗಿದೆ.
ಪೊಲೀಸ್ ಕಸ್ಟರಿ ಅಂತ್ಯ ಹಿನ್ನೆಲೆಯಲ್ಲಿ ನಗರದ ಎಸಿಎಂಎಂ ನ್ಯಾಯಾಲಯಕ್ಕೆ ದರ್ಶನ್ ಹಾಗೂ ಅವರ ಆಪ್ತರಾದ ವಿನಯ್, ಪ್ರದೂಷ್ ಹಾಗೂ ಧನರಾಜ್ ರನ್ನು ಇಂದು ಹಾಜಪರುಪಡಿಸಲಾಗುತ್ತದೆ. ಈಗಾಗಲೇ ಪ್ರಕರಣದ ತನಿಖೆ ಸಲುವಾಗಿ ಮೂರು ಬಾರಿ ವಶಕ್ಕೆ ಪಡದಿರುವ ಕಾರಣ ಮತ್ತೊಮ್ಮೆ ಆರೋಪಿಗಳನ್ನು ಪೊಲೀಸರು ಸುಪರ್ದಿಗೆ ಪಡೆಯುವ ಸಾಧ್ಯತೆಗಳು ಕಡಿಮೆಯಿದೆ. ಹೀಗಾಗಿ ನ್ಯಾಯಾಂಗ ಬಂಧನಕ್ಕೊಳಗಾದರೆ ದರ್ಶನ್ ಮತ್ತು ಅವರ ಗ್ಯಾಂಗ್ ಅಂತಿಮವಾಗಿ ಜೈಲು ಸೇರಲಿದೆ.
ನ್ಯಾಯಾಲಯದ ಮುಂದೆ ಗುರುವಾರ ದರ್ಶನ್ ಸೇರಿದಂತೆ ನಾಲ್ವರನ್ನು ಹಾಜರುಪಡಿಸಿ ಮತ್ತೆರೆಡು ದಿನ ಕಸ್ಟಡಿಗೆ ಪೊಲೀಸರು ಪಡೆದಿದ್ದರು. ಈ ಅವಧಿ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಇನ್ನು ಕಾನೂನಿನಲ್ಲಿ ಕೂಡ ಮತ್ತೆ ಕಸ್ಟಡಿಗೆ ಪಡೆಯಲು ಪೊಲೀಸರಿಗೆ ಅವಕಾಶವಿಲ್ಲ ಎನ್ನಲಾಗಿದೆ.
ಇನ್ನು ಈಗಾಗಲೇ ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ದರ್ಶನ್ ಪ್ರಿಯತಮೆ ಪವಿತ್ರಾಗೌಡ ಸೇರಿದಂತೆ 13 ಮಂದಿ ಆರೋಪಿಗಳು ಸೆರೆಮನೆ ವಾಸ ಶುರುವಾಗಿದೆ. ಹೀಗಾಗಿ ಬಾಕಿ ಉಳಿದಿರುವ ದರ್ಶನ್ ಸೇರಿ ನಾಲ್ವರು ಕೂಡ ಶನಿವಾರ ಸಂಜೆ ವೇಳೆಗೆ ಪೊಲೀಸ್ ಠಾಣೆಯ ಲಾಕಪ್ ನಿಂದ ಸೆಂಟ್ರಲ್ ಜೈಲ್’ನ ಕತ್ತಲ ಕೋಣೆಗೆ ಸ್ಥಳಾಂತರವಾಗಲಿದ್ದಾರೆ ಎಂದು ತಿಳಿದುಬಂದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಇದುವರೆಗೆ 17 ಆರೋಪಿಗಳನ್ನು ಬಂಧಿಸಲಾಗಿದೆ. ಅವರ ಪೈಕಿ 13 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದವರು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.