ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ದೋಂತಿಲ ಎಂಬಲ್ಲಿ ಶ್ರೀ ಮಹಾವಿಷ್ಣು ಸುಬ್ರಮಣ್ಯೇಶ್ವರ ದೇವಸ್ಥಾನದಲ್ಲಿ ಸುಮಾರು 800 ವರ್ಷ ಹಳೆಯದಾದ ಕನ್ನಡ ಶಿಲಾ ಶಾಸನವೊಂದು ಪತ್ತೆಯಾಗಿದೆ.
ವಿಶೇಷವೆಂದರೆ, ಇದುವರೆಗೆ ಕನ್ನಡ ಶಿಲಾ ಶಾಸನವನ್ನು ಶ್ರೀ ಸುಬ್ರಹ್ಮಣ್ಯ ದೇವರ ವಿಗ್ರಹವೆಂದು ಭಾವಿಸಿ, ನೂರಾರು ವರ್ಷಗಳಿಂದ ಪೂಜೆ ನಡೆಸಲಾಗುತ್ತಿತ್ತು. ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾದಾಗ ಇದು ದೇವರ ವಿಗ್ರಹ ಅಲ್ಲ, ಶಿಲಾಶಾಸನವೆಂಬ ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ. ಅಷ್ಟಕ್ಕೂ, ದೇವರೆಂದು ಪೂಜಿಸಲು ಕಾರಣ, ಶಾಸನದಲ್ಲಿ ಮಯೂರ ಅಂದರೆ ನವಿಲಿನ ಚಿತ್ರ ಕೊರೆದಿರುವುದೇ ಆಗಿದೆ.
ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ನಡೆಸಲ್ಪಡುವ “ಶಾಸನ -ಶೋಧನ- ಅಧ್ಯಯನ- ಸಂರಕ್ಷಣಾ” ಯೋಜನೆಯಡಿಯಲ್ಲಿ ಪ್ರಮುಖ ಅಧ್ಯಯನಕಾರರೂ ಇತಿಹಾಸ ತಜ್ಞರೂ ಆದ ಡಾ. ಉಮಾನಾಥ ಶೆಣೈ ವೈ ನೇತೃತ್ವದಲ್ಲಿ ಶಾಸನವನ್ನು ಅಧ್ಯಯನ ಮಾಡಲಾಯಿತು.
ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ. ವಿಘ್ನರಾಜ್ ಭಟ್, ವಿವೇಕಾನಂದ ಬಿ.ಎಡ್ ಕಾಲೇಜಿನ ಉಪನ್ಯಾಸಕಿ ರಾಜೀವಿ ಹಾಗೂ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅಧ್ಯಯನ ತಂಡದಲ್ಲಿ ಸಹಕರಿಸಿದರು.
ಶಾಸನಕ್ಕೆ ಪೂಜೆ, ಅಭಿಷೇಕ
ನೂರಾರು ವರ್ಷಗಳಿಂದ ಈ ಸ್ಥಳದಲ್ಲಿ ಒಂದು ಪುಟ್ಟ ಗುಡಿ ಇದ್ದು, ಅದರ ಗರ್ಭಗುಡಿಯಲ್ಲಿರುವ ಪಾಣಿ ಪೀಠದ ಮಧ್ಯದಲ್ಲಿ ಈಗ ಬೆಳಕಿಗೆ ಬಂದ ಶಿಲಾ ಶಾಸನದ ಮೇಲ್ಭಾಗ ಮಾತ್ರ ಕಾಣುತ್ತಿತ್ತು. ಇಲ್ಲಿನ ಸ್ಥಳೀಯರು ಶ್ರೀ ಸುಬ್ರಮಣ್ಯ ಸ್ವಾಮಿಯ ವಾಹನವಾದ ಮಯೂರ ರೂಪದಲ್ಲೇ ಸುಬ್ರಹ್ಮಣ್ಯನನ್ನು ಆವಾಹನೆ ಮಾಡಿ ಈ ಶಾಸನ ವನ್ನೇ ವಿಗ್ರಹವೆಂದು ತಿಳಿದು ಪೂಜಿಸುತ್ತಿದ್ದರು.
2024 ರಲ್ಲಿ ಈ ಗುಡಿಯನ್ನು ಜೀರ್ಣೋದ್ಧಾರ ಮಾಡುವ ಸಲುವಾಗಿ ಗರ್ಭಗುಡಿಯ ಒಳಗಿರುವ ವಿಗ್ರಹವನ್ನು ಬಾಲಾಲಯಕ್ಕೆ ಸ್ಥಳಾಂತರಿಸುವ ಸಮಯದಲ್ಲಿ ಮಯೂರ ರೂಪದಲ್ಲಿದ್ದ, ದೇವರ ವಿಗ್ರಹವೆಂದು ಭಾವಿಸಿದ ಈ ಶಿಲಾ ಕಲ್ಲನ್ನು ಮೇಲೆತ್ತುವಾಗ ಸುಮಾರು ಮೂರುವರೆ ಅಡಿ ಗಾತ್ರದ ಈ ಪುರಾತನ ಶಿಲಾಶಾಸನವು ಬೆಳಕಿಗೆ ಬಂದಿದೆ. ಅಲ್ಲಿಯವರೆಗೆ ಈ ಶಿಲಾ ಶಾಸನಕ್ಕೆ ಸರ್ವ ರೀತಿಯ ಪೂಜೆ ಪುರಸ್ಕಾರ ಅಭಿಷೇಕಗಳು ನಡೆಯುತ್ತಿತ್ತು ಎಂಬುದು ಅಚ್ಚರಿಯ ಸಂಗತಿ. ಇದು ಮೂರ್ತಿಯಲ್ಲ ಶಾಸನ ಎಂದು ತಿಳಿದ ಪ್ರಸ್ತುತ ಇದನ್ನು ಬಾಲಾಲಯದ ಹೊರ ಗೋಡೆಗೆ ತಗುಲಿಸಿ ಇಟ್ಟಿರುತ್ತಾರೆ. ಪ್ರಸ್ತುತ ಈ ಶಾಸನಕ್ಕೆ ಪೂಜೆ ಪುರಸ್ಕಾರಗಳು ನಡೆಯುತ್ತಿಲ್ಲ.
ಶಾಸನದ ಸ್ವರೂಪ
ಈ ಶಿಲಾ ಶಾಸನವು ಸುಮಾರು 30 ಇಂಚು ಎತ್ತರ ಹಾಗೂ 16 ಇಂಚು ಅಗಲ , 4 ಇಂಚು ದಪ್ಪ ಇದೆ. ಶಾಸನದ ಮುಖ್ಯ ಪಠ್ಯವನ್ನು 14 ಇಂಚು ಅಗಲ ಹಾಗೂ 17 ಇಂಚು ಎತ್ತರದ ಅಳತೆಯಲ್ಲಿ ಶಿಲೆಯನ್ನು ಅರ್ಧ ಇಂಚು ಒಳಭಾಗಕ್ಕೆ ಕೊರೆದು ಹೊರ ಭಾಗದಲ್ಲಿ ಚೌಕ ಆಕಾರದ ಉಬ್ಬು ಪಟ್ಟಿ ನೀಡಿ ಒಳ ಭಾಗವನ್ನು ಸಮತಟ್ಟಾಗಿ ಮಾಡಿ ಅಕ್ಷರಗಳನ್ನು ಕೆತ್ತಲಾಗಿದೆ. ಶಾಸನದ ಕೆಳಭಾಗವು ಅಂದರೆ ಭೂಮಿಯ ಒಳಗೆ ಹೂತು ಹಾಕುವ ಭಾಗವು 15 ಇಂಚು ಇದೆ.
ಶಾಸನದ 17 ಇಂಚು ಮೇಲೆ ಹೋದಂತೆ ಶಾಸನವು ಅರ್ಧಚಂದ್ರಾಕೃತಿ ಆಕಾರವನ್ನು ಪಡೆದಿದ್ದು, ಶಾಸನದ ಶಿರೋ ಭಾಗದ ಮಂಟಪದ ಮಧ್ಯದಲ್ಲಿ ಒಂದು ನವಿಲಿನ ಆಕೃತಿಯನ್ನು, ಅದರ ಬಲ ಭಾಗದಲ್ಲಿ ಸೂರ್ಯ ಹಾಗೂ ಸಣ್ಣ ದೀಪ, ಎಡ ಭಾಗದಲ್ಲಿ ಅರ್ಧಚಂದ್ರ ಹಾಗೂ ಸ್ವಲ್ಪ ದೊಡ್ಡದಾದ ಉರಿಯುತ್ತಿರುವ ದೀಪದ ಆಕೃತಿಯನ್ನು ಕೆತ್ತಲಾಗಿದೆ.
ಶಾಸನ ಪಠ್ಯ
ಈ ಶಾಸನದಲ್ಲಿ ಸುಮಾರು 15 ಸಾಲುಗಳಿದ್ದು ಕನ್ನಡ ಲಿಪಿಯಲ್ಲಿ ಶಾಸನವನ್ನು ಕೆತ್ತಲಾಗಿದೆ. ಲಿಪಿಯು ಸ್ಪಷ್ಟವಾಗಿ ಗೋಚರಿಸುತ್ತಿಲ್ಲ. ಸ್ವಸ್ತಿ ಶ್ರೀ ಎಂದು ಪ್ರಾರಂಭವಾಗುವ ಈ ಶಾಸನದಲ್ಲಿ ನೀರು ಲಭ್ಯವಾಗಲು ಮಹಾಯಾಗವನ್ನು ನಡೆಸಿದ ಉಲ್ಲೇಖವಿದೆ ಹಾಗೂ ಕುಕ್ಕೆಯ ದೈವಗಳು ಎಂಬ ಪದದ ಉಲ್ಲೇಖವಿದೆ. ಮಾತ್ರವಲ್ಲದೆ, ಶಾಸನದಲ್ಲಿ ‘ತುಳು ರಾಜ್ಯ’ ಎಂಬ ಪದದ ಪ್ರಯೋಗವಾಗಿದ್ದು, ಇದು ತುಳು ನಾಡಿನ ಭವ್ಯ ಪರಂಪರೆಯನ್ನು ಪುಷ್ಟೀಕರಿಸುವ ಮಹತ್ವದ ದಾಖಲೆಯು ಇದಾಗಿದೆ ಎನ್ನಬಹುದು. ಈ ಶಿಲಾ ಶಾಸನವು ವಿಜಯನಗರ ಸಾಮ್ರಾಜ್ಯ ಕಾಲಕ್ಕೆ ಸಂಬಂಧಿಸಿದ್ದು, ಸುಮಾರು 800 ವರ್ಷ ಹಳೆಯದಾಗಿದೆ. ಈ ಕ್ಷೇತ್ರದ ಬಗ್ಗೆ ಆಳವಾದ ಹಾಗೂ ವಿಚಾರ ನಿಷ್ಠವಾದ ಅಧ್ಯಯನ ನಡೆಸಿದರೆ ಇನ್ನೂ ಅನೇಕ ಐತಿಹಾಸಿಕ ಹಾಗೂ ಪದ್ಧತಿ ಪರಂಪರೆಯ ವಿಚಾರಗಳು ಬೆಳಕಿಗೆ ಬರಬಹುದು ಮಾತ್ರವಲ್ಲದೆ ಈ ಕ್ಷೇತ್ರವು ಇನ್ನೊಮ್ಮೆ ಐತಿಹಾಸಿಕ ವೈಭವದಿಂದ ಕಂಗೊಳಿಸಬಹುದು ಎಂದು ದ. ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ನಡೆಸಲ್ಪಡುವ “ಶಾಸನ -ಶೋಧನ- ಅಧ್ಯಯನ- ಸಂರಕ್ಷಣಾ” ಯೋಜನೆಯ ಪ್ರಮುಖ ಅಧ್ಯಯನಕಾರರಾದ ಇತಿಹಾಸ ತಜ್ಞರಾದ ಡಾ. ಉಮಾನಾಥ ಶೆಣೈ ವೈ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಾಸನ ಅಧ್ಯಯನದ ಸಮಯದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಸುಬ್ರಹ್ಮಣ್ಯ ಬಾಳ್ತಿಲ್ಲಾಯ, ಅರ್ಚಕ ಎನ್. ಕೆ ಅನಂತಪದ್ಮನಾಭ ನೂಜಿನ್ನಾಯ , ಪತ್ರಕರ್ತರಾದ ಸುಧೀರ್ ಕುಮಾರ್, ಭಜಕರಾದ ಸತೀಶ್ ಕೆ.ಎನ್ ಹಾಗೂ ಅನುದೀಪ ಬಾಳ್ತಿಲ್ಲಾಯ, ರವಿ ಮುಂತಾದವರು ಉಪಸ್ಥಿತರಿದ್ದರು