ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಮೆಲ್ಕಾರ್ ಬಂಟ್ವಾಳ ಇದರ ಕೇಂದ್ರೀಯ ಸಮಿತಿಯ ಸಭೆಯು ಕೇಮಾರು ಶ್ರೀ ಸಾಂದೀಪನಿ ಸಾಧನ ಆಶ್ರಮದಲ್ಲಿ ಜರಗಿತು.
ಶ್ರೀ ಈಶ ವಿಠಲದಾಸ ಸ್ವಾಮೀಜಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಲೌಕಿಕವಾದ ವಿಚಾರಗಳ ಬಗ್ಗೆ ಗಮನ ಕೊಡುವುದರ ಬದಲು ಪ್ರತಿಯೊಬ್ಬರು ಅಂತರ್ಮುಖಿಗಳಾಗಿ ಚಿಂತಿಸಿ ಜೀವನದಲ್ಲಿ ಒಳಿತನ್ನು ಸಾಧಿಸುವಂತಾಗಬೇಕೆಂದು ತಿಳಿಸಿದರು.
ಸಮಾಜದಲ್ಲಿರುವ ಹಿರಿಯರ ಅನುಭವ ಮತ್ತು ಚಿಂತನೆಗಳು ಎಲ್ಲರಿಗೂ ಉತ್ತಮ ದಾರಿಯಲ್ಲಿ ಸಾಗಲು ಪ್ರಯೋಜನಕಾರಿ. ವೇದ, ಉಪನಿಷತ್ ಮತ್ತು ಭಗವದ್ಗೀತೆಗಳ ಅಧ್ಯಯನದಿಂದ ಯಾವುದೇ ಸಮಸ್ಯೆಗಳಿಗೆ ಪರಿಹಾರವನ್ನು ಕಾಣಬಹುದು ಎಂದು ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಕಯ್ಯಾರು ನಾರಾಯಣ ಭಟ್ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಪ್ರತಿಷ್ಠಾನದ ಕಾರ್ಯಗಳಿಗೆ ಉತ್ತಮ ಸ್ಪಂದನೆ ದೊರೆತಿದ್ದು ಘಟಕಗಳನ್ನು ಉಡುಪಿ ಜಿಲ್ಲೆಯಲ್ಲಿ ವಿಸ್ತರಿಸಲು ಪ್ರಯತ್ನಿಸಲಾಗುವುದು ಎಂದರು.
ಶಂಕರ ಜಯಂತಿಯ ಬಗ್ಗೆ ಡಾ. ಬಿ . ಯನ್. ಮಹಾಲಿಂಗ ಭಟ್ ಉಪನ್ಯಾಸ ನೀಡಿದರು. ಹಿರಿಯರ ಸೇವಾ ಪ್ರತಿಷ್ಠಾನದ ಸಹಯೋಗದಲ್ಲಿ ಶಂಕರ ಪ್ರತಿಷ್ಠಾನ ಬಂಟ್ವಾಳದ ವತಿಯಿಂದ ಜಿಲ್ಲೆಯ ಬೇರೆ ಬೇರೆ ಭಾಗಗಳಲ್ಲಿ ನಡೆಸುವ ಕಾರ್ಯಕ್ರಮಗಳ ಮಾಹಿತಿ ನೀಡಿದರು.
ಪ್ರತಿಷ್ಠಾನದ ಉಪಾಧ್ಯಕ್ಷ ಜಯರಾಮ ಭಂಡಾರಿ ಧರ್ಮಸ್ಥಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧ ಘಟಕಗಳ ಪದಾಧಿಕಾರಿಗಳಾದ ಭರತ್ ಕೆ ಮಂಗಳೂರು, ಬಾಲಕೃಷ್ಣ ಶೆಟ್ಟಿ. ಬಿ ಶಿವಕುಮಾರ್, ಗಣೇಶ ಆಚಾರ್ಯ ಜೆಪ್ಪು, ಭವಾನಿ ಶಂಕರ ಶೆಟ್ಟಿ ಪುತ್ತೂರು, ಚಂದ್ರಶೇಖರ ಆಳ್ವ ಪಡುಮಲೆ, ಉದಯಶಂಕರ ರೈ ಪುಣಚ, ಸ್ವರ್ಣಲತಾ ಪುತ್ತೂರು, ವಾರಿಜ ಬೆಳ್ತಂಗಡಿ ಮೊದಲಾದವರು ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕಿ ಪ್ರೇಮ ವಿ. ಶೆಟ್ಟಿ ಪ್ರಾರ್ಥಿಸಿ, ಬೆಳ್ತಂಗಡಿ ಘಟಕದ ಸಂಚಾಲಕ ವಸಂತ ಸುವರ್ಣ ಸ್ವಾಗತಿಸಿದರು. ಪ್ರತಿಷ್ಠಾನದ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿ, ಸಹ ಸಂಚಾಲಕ ಭಾಸ್ಕರ ಬಾರ್ಯ ವಂದಿಸಿದರು.