ಮಂಗಳೂರು: ಒಂದೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಿದ್ದ ದಕ್ಷಿಣ ಕನ್ನಡ ಇದೀಗ ಬಿಜೆಪಿ ಭದ್ರ ಬಾಹುವಿನಲ್ಲಿ ಬಂಧಿಯಾಗಿದೆ. ಇದೀಗ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿಯಿಂದ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಸಮರ್ಥ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇದೀಗ ಚೌಟಾ ಅವರಿಗೆ ಪ್ರತಿಸ್ಪರ್ಧಿಯಾಗಿ ಹಾಗೂ ಕಳೆದುಕೊಂಡ ಕ್ಷೇತ್ರವನ್ನು ಮರು ಸಂಪಾದಿಸಿಕೊಳ್ಳುವುದೇ ಕಾಂಗ್ರೆಸ್ ಮುಂದಿರುವ ಬಹುದೊಡ್ಡ ಸವಾಲು.
ವಿಧಾನಸಭಾ ಚುನಾವಣೆಯಂತೆ ಬಿಜೆಪಿ ಬಂಡಾಯ ಕಾಂಗ್ರೆಸಿಗೆ ವರದಾನ ಎಂಬ ಲೆಕ್ಕಾಚಾರ ಇದೀಗ ಉಲ್ಟಾ ಆಗಿದೆ. ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಹಾಗಾಗಿ ಕಾಂಗ್ರೆಸ್ ಗೆಲುವು ಅಷ್ಟು ಸುಲಭದ ಮಾತಲ್ಲ. ಹಾಗಾಗಿ ಅಭ್ಯರ್ಥಿ ಆಯ್ಕೆಯ ಬಗ್ಗೆ ಇನ್ನು ಅಧಿಕೃತ ಮಾಹಿತಿ ಹೊರಹಾಕಿಲ್ಲ.
ಜಾತಿ ಲೆಕ್ಕಾಚಾರ:
ಬಂಟ ಸಮುದಾಯದ ಕ್ಯಾ. ಚೌಟ ಅವರಿಗೆ ಬಿಜೆಪಿ ಟಿಕೇಟ್ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಿಲ್ಲವ ಮುಖಂಡನಿಗೆ ಟಿಕೇಟ್ ನೀಡಲು ಯೋಜನೆ ಸಿದ್ಧಪಡಿಸಿಕೊಂಡಿದೆ ಎಂಬ ವಿಶ್ಲೇಷಣೆ ಕೇಳಿಬಂದಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಬಂಟ ಸಮುದಾಯದ ನಳಿನ್ ಕುಮಾರ್ ಕಟೀಲ್ ಎದುರು ಕಾಂಗ್ರೆಸ್ ಅಭ್ಯರ್ಥಿಯಾಗಿ ಅದೇ ಬಂಟ ಸಮುದಾಯದ ಮಿಥುನ್ ರೈ ಕಣಕ್ಕಿಳಿದಿದ್ದರು. ಆದರೆ ಮೋದಿ ಅಲೆಯ ಮುಂದೆ ಎಲ್ಲವೂ ಕೊಚ್ಚಿಕೊಂಡುಹೋಗಿತ್ತು. ಬಂಟ ಸಮುದಾಯದ ಕಾಂಗ್ರೆಸ್ ಲೆಕ್ಕಾಚಾರ ಬುಡಮೇಲಾಗಿತ್ತು.
ಕರಾವಳಿಯಲ್ಲಿ ಬಂಟ, ಬಿಲ್ಲವ ಸಮುದಾಯದ ಸಂಖ್ಯೆ ಹೆಚ್ಚಿದೆ. ಹಾಗಾಗಿ ಬಂಟ ಸಮುದಾಯದ ಪ್ರತಿಸ್ಪರ್ಧಿಯಾಗಿ ಬಿಲ್ಲವ ಸಮುದಾಯದ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೆ ಎಂಬುದು ಸದ್ಯದ ಮಾಹಿತಿ.
ಜನಾರ್ದನ ಪೂಜಾರಿ ಆಪ್ತ!
ಗುರು ಬೆಳದಿಂಗಳು ಕಾರ್ಯಕ್ರಮದ ಮೂಲಕ ಫೇಮಸ್ ಆಗಿರುವ, ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಆಪ್ತ ಪದ್ಮರಾಜ್ ರಾಮಯ್ಯ ಕಾಂಗ್ರೆಸ್ ಅಭ್ಯರ್ಥಿ ಎನ್ನುವ ಮಾತು ಕೇಳಿಬರುತ್ತಿದೆ. ಕಾಂಗ್ರೆಸ್ ಹೈಕಮಾಂಡ್ ಪದ್ಮರಾಜ್ ಹೆಸರನ್ನೇ ಅಂತಿಮ ಮಾಡಲಿದೆ ಎಂದು ತಿಳಿದುಬಂದಿದೆ.
ವಿನಯ್ ಕುಮಾರ್ ಸೊರಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್.ಸುಧಾಕರ್ ಅವರಂತಹ ಘಟಾನುಘಟಿ ನಾಯಕರೂ ಕಾಂಗ್ರೆಸ್ ಟಿಕೇಟಿನ ರೇಸ್ ನಲ್ಲಿದ್ದಾರೆ ಎಂದು ತಿಳಿದುಬಂದಿದೆ.