ನವದೆಹಲಿ: ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆಯೇ? ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಈ ಇಬ್ಬರೂ ಖ್ಯಾತನಾಮರು ಬಿಜೆಪಿ ಟಿಕೆಟ್ನಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಗುರುವಾರ ರಾತ್ರಿಯಿಡೀ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆದ ಬೆನ್ನಲ್ಲೇ ಈ ಸುದ್ದಿಗಳು ಹರಿದಾಡತೊಡಗಿವೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2014 ಮತ್ತು 2019ರಲ್ಲಿ ಎಲ್ಲಾ 7 ಲೋಕಸಭೆ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿ ಈ ಬಾರಿ ಹಾಲಿ ಸಂಸದರಿಗೆ ಮತ್ತೆ ಟಿಕೆಟ್ ನೀಡುವುದನ್ನು ಬಿಟ್ಟು ಹೊಸಬರಿಗೆ ಮಣೆ ಹಾಕಲು ಯೋಜಿಸುತ್ತಿದೆ. ಅದರಂತೆ ಚಾಂದಿನಿ ಚೌಕ್ನಿಂದ ನಟ ಅಕ್ಷಯ್ ಕುಮಾರ್ ಅವರನ್ನು ಕಣಕ್ಕಿಳಿಸಲು ಮಾತುಕತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. ಕೇಂದ್ರ ಸಚಿವ ಡಾ. ಹರ್ಷವರ್ಧನ್ 2014 ಮತ್ತು 2019ರ ಲೋಕಸಭೆ ಚುನಾವಣೆಗಳಲ್ಲಿ ಚಾಂದಿನಿ ಚೌಕ್ನಿಂದ ಗೆಲುವು ಸಾಧಿಸಿದ್ದರು. ಈಗ ಈ ಕ್ಷೇತ್ರದಲ್ಲಿ ಅಕ್ಷಯ್ ಸ್ಪರ್ಧಿಸಲಿದ್ದಾರೆ ಎಂಬ ವಿಚಾರ ಮಹತ್ವ ಪಡೆದುಕೊಂಡಿದೆ.
ಇದೇ ವೇಳೆ, ಪಂಜಾಬ್ನಲ್ಲಿ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಬಿಜೆಪಿ ಟಿಕೆಟ್ನಲ್ಲಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ. ಇತ್ತೀಚೆಗಷ್ಟೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಯುವರಾಜ್ ಭೇಟಿಯಾಗಿದ್ದು, ಈ ವಾದಕ್ಕೆ ಪುಷ್ಟಿ ನೀಡಿದೆ. ಇವರಷ್ಟೇ ಅಲ್ಲದೇ, ಇನ್ನೂ ಹಲವು ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್ ಸಿಗಲಿದ್ದು, ಮೊದಲ 100 ಅಭ್ಯರ್ಥಿಗಳ ಪಟ್ಟಿಯಲ್ಲಿ ಹೊಸಬರ ಹೆಸರುಗಳನ್ನು ಸೇರಿಸಲಾಗಿದೆ ಎಂದು ಮೂಲಗಳು ಹೇಳಿವೆ. ಇದೇ ವೇಳೆ, ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬೃಜ್ಭೂಷಣ್ ಸಿಂಗ್ ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.