ಪುತ್ತೂರು: ಭಾರತ ದೇಶದ ಸಾಂಸ್ಕೃತಿಕ ವೈಭವವನ್ನು ಅನಾವರಣಗೊಳಿಸುವ ಪ್ರತಿಷ್ಠಿತ ಆಳ್ವಾಸ್ ನುಡಿಸಿರಿ ವಿರಾಸತ್ ಕಾರ್ಯಕ್ರಮವು ನ.16ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿದ್ದು, ನಿರೀಕ್ಷೆಗೂ ಮೀರಿ ಜನಸಾಗರ ಹರಿದು ಬರುವ ಸಾಧ್ಯತೆ ಇದೆ ಎಂದು ಪುತ್ತೂರು ಬಂಟರ ಸಂಘದ ಅಧ್ಯಕ್ಷ ಹಾಗೂ ಮೋಹನ್ ಆಳ್ವ ಅವರ ಅಭಿಮಾನಿ ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಳ್ವಾಸ್ ಶಿಕ್ಷಣ ಸಂಸ್ಥೆಯು ರಾಜ್ಯ ಮಟ್ಟದಲ್ಲಿ ಆಯೋಜಿಸುವ ಬಹುದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮ ಇದೇ ಮೊದಲ ಬಾರಿಗೆ ಪುತ್ತೂರಿನಲ್ಲಿ ನಡೆಯುತ್ತಿರುವುದು ನಮ್ಮ ಹೆಮ್ಮೆಯ ವಿಚಾರ ಎಂದು ಹೇಳಿದರು.
10 ವರ್ಷಗಳ ಬಳಿಕ ಪುತ್ತೂರಿಗೆ ಸಾಂಸ್ಕೃತಿಕ ವೈಭವ ಇದಕ್ಕೂ ಮೊದಲು 10 ವರ್ಷಗಳ ಹಿಂದೆ ಪುತ್ತೂರಿನ ಸುದಾನ ಶಾಲೆಯಲ್ಲಿ ಎರಡು ಬಾರಿ ಆಳ್ವಾಸ್ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿತ್ತು. ಇದೀಗ ದಶಕದ ನಂತರ ಮತ್ತೆ ಇಂತಹ ಅದ್ಧೂರಿ ಕಾರ್ಯಕ್ರಮ ಪುತ್ತೂರಿನಲ್ಲಿ ಆಯೋಜನೆಗೊಂಡಿದೆ. ರಾಜ್ಯದ ಹಲವೆಡೆಯಿಂದ ಕಾರ್ಯಕ್ರಮಕ್ಕೆ ಬೇಡಿಕೆ ಇದ್ದರೂ, ಪುತ್ತೂರಿನ ಮೇಲಿನ ವಿಶೇಷ ಅಭಿಮಾನದ ಹಿನ್ನೆಲೆಯಲ್ಲಿ ಮೋಹನ್ ಆಳ್ವ ಅವರು ಈ ಬೃಹತ್ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಿದ್ದಾರೆ ಎಂದು ಕಾವು ಹೇಮನಾಥ ಶೆಟ್ಟಿ ತಿಳಿಸಿದರು.
ಜಾತಿ–ಧರ್ಮ ಮೀರಿ ನಡೆಯುವ ಹಬ್ಬ ಜಾತಿ, ಮತ, ಧರ್ಮಗಳ ಭೇದವಿಲ್ಲದೆ ನಡೆಯುವ ಈ ಸಾಂಸ್ಕೃತಿಕ ವೈಭವಕ್ಕೆ ಜನಸಂಖ್ಯೆ ನಿರೀಕ್ಷೆಗೂ ಮೀರಲಿದೆ. ದೇಶದ ವಿವಿಧ ರಾಜ್ಯಗಳ ವೈವಿಧ್ಯಮಯ ಸಂಸ್ಕೃತಿ, ಕಲಾ ಪ್ರದರ್ಶನಗಳನ್ನು ಶಾಲಾ ಮಕ್ಕಳು ನೋಡುವ ಅವಕಾಶ ಸಿಗುತ್ತಿರುವುದು ಅವರಿಗೆ ಸುವರ್ಣಾವಕಾಶವಾಗಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ಸುಮಾರು 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಂಸ್ಕೃತಿಕ ಪ್ರದರ್ಶನ ನೀಡಲಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಪ್ರೊ. ಉಷಾ, ದಂಬೆಕಾನ ಸದಾಶಿವ ರೈ, ಶ್ರೀ ಪ್ರಸಾದ್ ಪಾಣಾಜೆ, ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು.


























