ಕಡಲತೀರದಲ್ಲಿ ಸಿಡಿಲು ಬಡಿದು ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಮೆರಿಕದ ಪೋರ್ಟೊರಿಕೊ ಕಡಲತೀರದಲ್ಲಿ ನಡೆದಿದ್ದು, ಘಟನೆಯ ವಿಡಿಯೋ ವೈರಲ್ ಆಗಿದೆ.
ಮೇ 27 ರಂದು ನಡೆದ ಘಟನೆಯಲ್ಲಿ ಮೂವರು ಮಕ್ಕಳಿಗೆ ಗಾಯವಾಗಿದ್ದು, ಈ ಪೈಕಿ ಒಂದು ಮಗು ಗಂಭೀರವಾಗಿ ಗಾಯಗೊಂಡಿದೆ ಎಂದು ಪೋರ್ಟೊ ರಿಕನ್ ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡ ಮಕ್ಕಳು 7, 10 ಮತ್ತು 12 ವರ್ಷ ವಯಸ್ಸಿನವರಾಗಿದ್ದಾರೆ. ಅವರಿಗೆ ಅಗುಡಿಲ್ಲಾದಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಾಷಿಂಗ್ಟನ್ ಪೋಸ್ಟ್ ವರದಿ ಪ್ರಕಾರ, ಸಿಡಿಲು ಬಡಿದು ಗಾಯಗೊಂಡ 12 ವರ್ಷದ ಮಗು ಗಂಭೀರ ಸ್ಥಿತಿಯಲ್ಲಿದೆ ಎಂದು ಹೇಳಲಾಗಿದೆ.
ಮಕ್ಕಳಿಗೆ ಸಿಡಿಲು ಬಡಿದ ದೃಶ್ಯ ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಸಿಡಿಲು ಬಡಿದ ತಕ್ಷಣವೇ ಮಕ್ಕಳು ಪ್ರಜ್ಞಾಹೀನರಾಗಿ ನೆಲಕ್ಕೆ ಉರುಳುತ್ತಿರುವ ದೃಶ್ಯ ಕಂಡು ಬಂದಿದೆ.