ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವವವು ಗುರುವಾರ (ಡಿ.12) ಕೊಪ್ಪರಿಗೆ ಇಳಿಯುವುದರೊಂದಿಗೆ ಸಂಪನ್ನಗೊಂಡಿತು. ಮುಂಜಾನೆ ದೇವಳದ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ಅವರು ವೈದಿಕ ವಿಧಾನ ನೆರವೇರಿಸಿದರು.
ಉತ್ಸವದ ನಿಮಿತ್ತ ದೇವಳದ ಹೊರಾಂಗಣದ ಸುತ್ತ ಮಧ್ಯಾಹ್ನದ ನಂತರ ನೀರು ತುಂಬಿಸಲಾಯಿತು. ರಾತ್ರಿ ಮಹಾಪೂಜೆಯ ಬಳಿಕ ನೀರಿನಲ್ಲಿ ದೇವರ ದೀಪಾರಾಧನೆಯುಕ್ತ ಪಾಲಕಿ ಉತ್ಸವ, ನಂತರ ದೇವರ ಶೇಷವಾಹನಯುಕ್ತ ಬಂಡಿ ರಥೋತ್ಸವ ನಡೆಯಿತು. ಬಳಿಕ ವಿವಿಧ ಸಂಗೀತ ಸುತ್ತುಗಳ ಪಾಲಕಿ ಉತ್ಸವ ನಡೆಯಿತು. ದೇವಳದ ಆನೆ ಯಶಸ್ವಿಯು ಹೊರಾಂಗಣದ ನೀರಿನಲ್ಲಿ ಸಂಭ್ರಮಿಸಿತು. ಪುಟಾಣಿ ಮಕ್ಕಳ ಮೇಲೆ ನೀರು ಸಿಂಪಡಿಸಿತು.
ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ನಿವೃತ್ತ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ರವೀಂದ್ರನಾಥ ಶೆಟ್ಟಿ ಕೇನ್ಯ, ಮೋಹನರಾಂ ಸುಳ್ಳಿ, ಮಾಸ್ಟರ್ಬ್ಲ್ಯಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಪವನ್ ಎಂ.ಡಿ., ಅಚ್ಚುತ ಗೌಡ ಆಲ್ಕಬೆ, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಅಕೌಂಟೆಂಟ್ ರಾಜಲಕ್ಷ್ಮಿ ಶೆಟ್ಟಿಗಾರ್, ದೇವಳದ ಹೆಬ್ಬಾರ್ ಪ್ರಸನ್ನ ಭಟ್, ಪಾಟಾಳಿ ಲೋಕೇಶ್ ಎ.ಆರ್., ಭಾಗವಹಿಸಿದ್ದರು.
ಇಂದಿನಿಂದ ಸರ್ಪಸಂಸ್ಕಾರ ಸೇವೆ ಆರಂಭ: ಗುರುವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಜಾತ್ರೆ ಮುಕ್ತಾಯವಾಗಿರುವುದರಿಂದ ಡಿ.13ರಿಂದ ಸರ್ಪಸಂಸ್ಕಾರ ಸೇವೆ ಆರಂಭಗೊಂಡಿದೆ.