ನಗೋಯಾ: ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಚಿನ್ನದ ಪದಕದ ಖಾತೆಗೆ ಮತ್ತೊಂದು ಸೇರ್ಪಡೆಯಾಗಿದೆ. ಮಹಿಳೆಯರ ಕಬಡ್ಡಿ ವಿಭಾಗದ ಫೈನಲ್ ಪಂದ್ಯದಲ್ಲಿ ಭಾರತ ತಂಡ ಇರಾನ್ ವಿರುದ್ಧ 37-34 ಅಂತರದ ರೋಚಕ ಗೆಲುವು ಸಾಧಿಸಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದೆ.
ನಗೋಯಾದಲ್ಲಿ ನಡೆದ ಫೈನಲ್ ಪಂದ್ಯ ಆರಂಭದಿಂದಲೇ ತೀವ್ರ ಪೈಪೋಟಿಯಿಂದ ಕೂಡಿತ್ತು. ಭಾರತಕ್ಕೆ ಇರಾನ್ ತಂಡವು ದಿಟ್ಟ ಪೈಪೋಟಿ ನೀಡಿದ್ದು, ಪಂದ್ಯದ ಹಲವು ಹಂತಗಳಲ್ಲಿ ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿದವು. ಒಂದು ಹಂತದಲ್ಲಿ ಇರಾನ್ ಗೆಲುವಿನ ನಿರೀಕ್ಷೆ ಮೂಡಿಸಿತ್ತು.
ಕೊನೆಯ ಹಂತದಲ್ಲಿ ಇರಾನ್ ತಂಡ ಭಾರತವನ್ನು ಆಲ್ಔಟ್ ಮಾಡುವ ಮೂಲಕ ಅಂತರವನ್ನು ಕಡಿಮೆ ಮಾಡಿತು. ಬಳಿಕ ಮದದಿ ಮತ್ತೆರಡು ಅಂಕಗಳನ್ನು ಗಳಿಸಿ ಭಾರತದ ಮುನ್ನಡೆಯನ್ನು ಮತ್ತಷ್ಟು ಕುಗ್ಗಿಸಿದರು.
ಈ ವೇಳೆ ಭಾರತ ಪರ ಸಂಜು ನಿರ್ಣಾಯಕವಾಗಿ ಎರಡು ಅದ್ಭುತ ರೈಡ್ಗಳನ್ನು ನಡೆಸಿದರು. ಎರಡನೇ ರೈಡ್ನಲ್ಲಿ ಬಹುಅಂಕ ಗಳಿಸುವ ಮೂಲಕ ಭಾರತಕ್ಕೆ ಮತ್ತೆ ಮುನ್ನಡೆ ತಂದುಕೊಟ್ಟರು. ನಂತರ ಪುಷ್ಪಾ ಯಶಸ್ವಿ ಟ್ಯಾಕಲ್ ಮಾಡುವ ಮೂಲಕ ಭಾರತದ ಮುನ್ನಡೆಯನ್ನು ಹೆಚ್ಚಿಸಿದರು.
ಅಂತಿಮವಾಗಿ ಭಾರತ 37-34 ಅಂತರದಿಂದ ಇರಾನ್ ತಂಡವನ್ನು ಮಣಿಸಿ ಮಹಿಳೆಯರ ಕಬಡ್ಡಿಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿತು. ಭಾರತದ ಗೆಲುವಿನ ಬಳಿಕ ಕ್ರೀಡಾಪಟುಗಳು ಹಾಗೂ ಬೆಂಬಲಿಗರಲ್ಲಿ ಸಂಭ್ರಮ ಮನೆಮಾಡಿತು.
ಭಾರತದ ವಿರುದ್ಧ ಕೊನೆಯವರೆಗೂ ಹೋರಾಡಿದ ಇರಾನ್ ಆಟಗಾರ್ತಿಯರು ಸೋಲಿನ ಬಳಿಕ ಭಾವುಕರಾಗಿ ಕಣ್ಣೀರಿಟ್ಟರು. ಜಪಾನ್ನ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ರೋಚಕ ಫೈನಲ್ನಲ್ಲಿ ಗೆಲುವು ಸಾಧಿಸಿದ ಭಾರತೀಯ ಕ್ರೀಡಾಪಟುಗಳು ಸಂತಸ ಹಂಚಿಕೊಂಡರು.
























