ಹೊಸ ವರ್ಷ ಆಚರಣೆಗೆ ದಿನಗಣನೆ ಶುರುವಾಗಿದೆ. ಈ ಬಾರಿ ಹೆಚ್ಚಿನ ಭದ್ರತೆಗಾಗಿ ಬೆಂಗಳೂರು ಕೇಂದ್ರ ವಿಭಾಗ ಪೊಲೀಸರಿಂದ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಹೆಚ್ಚು ಬಿಗಿ ಭದ್ರತೆಗೆ ಕೇಂದ್ರ ವಿಭಾಗ ಡಿಸಿಪಿ ಶೇಖರ್ ತಯಾರಿ ನಡೆಸಿದ್ದಾರೆ. ಇದೇ ಮೊದಲ ಬಾರಿಗೆ ಬೌನ್ಸರ್ ತಂಡಗಳ ಜೊತೆ ಪೊಲೀಸರು ಸಭೆ ಮಾಡಿದ್ದಾರೆ.
ಪಬ್, ಬಾರ್ ಮತ್ತು ರೆಸ್ಟೋರೆಂಟ್ ಪಾರ್ಟಿ ಸ್ಥಳಗಳಲ್ಲಿ ನಿಯೋಜನೆಗೊಳ್ಳುವ ಬೌನ್ಸರ್ಗಳು ಮಹಿಳೆಯರು, ಯುವತಿಯರ ಬಳಿ ಹೇಗೆ ನಡೆದುಕೊಳ್ಳಬೇಕು ಪಾರ್ಟಿ ಪ್ರಿಯರ ಜೊತೆ ನಡೆದುಕೊಳ್ಳುವ ವಿಧಾನದ ಬಗ್ಗೆ ಸಲಹೆ ನೀಡಲಾಗಿದೆ.
ಕುಡಿದ ಮತ್ತಲ್ಲಿ ಯಾರಾದರೂ ಅಸಭ್ಯ ವರ್ತನೆ ತೋರಿದ್ದಲ್ಲಿ ಅವರನ್ನು ಪೊಲೀಸರಿಗೆ ಹೇಗೆ ಒಪ್ಪಿಸಬೇಕು. ಪೊಲೀಸರ ಜೊತೆ ಸಂಪರ್ಕ ಹಾಗೂ ಕಾರ್ಯ ವಿಧಾನದ ಬಗ್ಗೆ ತಿಳಿಸಲಾಗಿದೆ. ಇದಲ್ಲದೆ ಕೇಂದ್ರ ವಿಭಾಗದ ಪಬ್, ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕರು, ಪಾರ್ಟಿ ಹಾಲ್, ಖಾಸಗಿ ಹೋಟೆಲ್ ಮ್ಯಾನೇಜರ್ಗಳ ಜೊತೆಗೂ ಸಭೆ ಮಾಡಲಾಗಿದೆ.
ಹೊಸ ವರ್ಷಕ್ಕೆ ಮಾರ್ಗಸೂಚಿಗಳ ಪಾಲನೆ ಜೊತೆಗೆ ಹೇಗೆ ಪಾರ್ಟಿ ಆಯೋಜನೆ ಮಾಡಬೇಕೆಂಬ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಅಲ್ಲದೆ ಮಾಲೀಕರಿಂದಲೂ ಅಭಿಪ್ರಾಯಗಳನ್ನು ಡಿಸಿಪಿ ಪಡೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮ ಆಚರಿಸುವ ಪ್ರಮುಖ ರಸ್ತೆಗಳು ಅಂದರೆ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ರಿಜ್ಮಂಡ್ ರಸ್ತೆ, ಕಬ್ಬನ್ ರಸ್ತೆ, ಟ್ರಿನಿಟಿ ರಸ್ತೆ, ಫೀನಿಕ್ಸ್ ಮಾಲ್, ಕೋರಮಂಗಲ, ಇಂದಿರಾನಗರ ಸೇರಿದಂತೆ ಪಬ್ಗಳು ಕ್ಲಬ್ಗಳು. ಇಲ್ಲಿ ಜನಸಂದಣಿ ಹೆಚ್ಚಾಗಿರುತ್ತದೆ.