ಮೆಕ್ಕಾದ ಮಸೀದಿಯೊಂದರಲ್ಲಿ “ಅನೈತಿಕ ಕೃತ್ಯ” ಎಸಗಿದ್ದಾರೆಂಬ ಆರೋಪದ ಮೇಲೆ ಇಬ್ಬರು ಬಾಂಗ್ಲಾದೇಶಿ ವಲಸೆ ಕಾರ್ಮಿಕರನ್ನು ಸೌದಿ ಅರೇಬಿಯಾ ಸರ್ಕಾರ ಗಲ್ಲಿಗೇರಿಸಿದೆ. ಈ ಘಟನೆಯು ಬಾಂಗ್ಲಾದೇಶ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಖಾಸಗಿ ವಿಚಾರಣೆ, ಯಾವುದೇ ಪಾರದರ್ಶಕತೆ ಇಲ್ಲದಿರುವುದು, ಅಪರಾಧದ ನಿಖರ ಸ್ವರೂಪವನ್ನು ಬಹಿರಂಗಪಡಿಸದಿರುವುದು ಹಾಗೂ ಇಬ್ಬರು ಪ್ರಜೆಗಳನ್ನು ಗಲ್ಲಿಗೇರಿಸಿದ ನಂತರವಷ್ಟೇ ಢಾಕಾಗೆ (ಬಾಂಗ್ಲಾದೇಶ ಸರ್ಕಾರಕ್ಕೆ) ಮಾಹಿತಿ ನೀಡಿರುವುದು ಈ ಭಾರಿ ರಾಜತಾಂತ್ರಿಕ ಹಾಗೂ ಮಾನವ ಹಕ್ಕುಗಳ ಆಕ್ರೋಶಕ್ಕೆ ಮುಖ್ಯ ಕಾರಣ ಎಂದು ಆರೋಪಿಸಲಾಗಿದೆ.
ಸೌದಿ ಮಾಧ್ಯಮಗಳ ಪ್ರಕಾರ, ಮೆಕ್ಕಾದ ಮಸೀದಿಯೊಂದರಲ್ಲಿ ಎಸಗಲಾದ “ಅನೈತಿಕ ಕೃತ್ಯಗಳಿಗಾಗಿ” ಈ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳಿಗೆ ಮರಣದಂಡನೆ ವಿಧಿಸಲಾಯಿತು. ಸೌದಿಯ ‘ತಅಝೀರ್’ (Ta’zir – ನ್ಯಾಯಾಧೀಶರ ವಿವೇಚನಾಧಿಕಾರಕ್ಕೊಳಪಟ್ಟ ಶಿಕ್ಷೆ) ಕಾನೂನಿನಡಿ ಈ ಇಬ್ಬರು ಬಾಂಗ್ಲಾದೇಶಿಯರಿಗೆ ಮರಣದಂಡನೆ ವಿಧಿಸಲಾಗಿದ್ದು, ರಾಜ ಮನೆತನದ ಆದೇಶದ ಮೇರೆಗೆ ಗಲ್ಲಿಗೇರಿಸಲಾಗಿದೆ.
ಮೃತರನ್ನು ನಜ್ರುಲ್ ಇಸ್ಲಾಂ ಅಬ್ದುಲ್ ಬಸೀರ್ (Nazrul Islam Abdul Basir) ಮತ್ತು ಸಿಟಿ ಅಖ್ತರ್ (Siti Akhtar) ಎಂದು ಸೌದಿ ಆಂತರಿಕ ಸಚಿವಾಲಯವನ್ನು ಉಲ್ಲೇಖಿಸಿ ಮಾಧ್ಯಮಗಳು ಗುರುತಿಸಿವೆ.
ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವರದಿಗಳ ಪ್ರಕಾರ, ಈ ಇಬ್ಬರೂ ಪ್ರೇಮಿಗಳು ಅಥವಾ ದಂಪತಿಯಾಗಿದ್ದು, ಮಸೀದಿಯ ಆವರಣದಲ್ಲಿ ನಜ್ರುಲ್ ತನ್ನ ಜೊತೆಗಾರ್ತಿಯ ಹಣೆಗೆ ಮುತ್ತು ನೀಡಿದ್ದ. ಇದೇ ಕಾರಣಕ್ಕೆ ಮರಣದಂಡನೆ ವಿಧಿಸಲಾಗಿದೆ ಎಂಬ ವದಂತಿಗಳು ಹರಡಿವೆ.
ಗಲ್ಲಿಗೇರಿಸಿದ ಸುದ್ದಿ ಕೇಳಿ ಅತ್ತೆ ಸಾವು!
ಬಾಂಗ್ಲಾದೇಶದ ಚಟ್ಟೋಗ್ರಾಮ್ ವಿಭಾಗದ ಬ್ರಾಹ್ಮಣಬಾರಿಯಾ ಮೂಲದ ನಜ್ರುಲ್ ಇಸ್ಲಾಂ, 2022 ರ ನವೆಂಬರ್ನಲ್ಲಿ ಸೌದಿಗೆ ತೆರಳಿದ್ದ. ಆತ ಮೆಕ್ಕಾದ ‘ಮಸೀದ ಅಲ್-ಹರಾಮ್’ನಲ್ಲಿ ಸಫಾಯಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಕೆಲಸಕ್ಕೆ ಸೇರಿದ ಎಂಟು ತಿಂಗಳ ನಂತರ ಅಂದರೆ 2023 ರಲ್ಲಿ ಸೌದಿ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ತಳ್ಳಿದ್ದರು. ನಜ್ರುಲ್ ಕುಟುಂಬಸ್ಥರು ಅಕ್ಟೋಬರ್ 11 ರಂದು ಕೊನೆಯ ಬಾರಿಗೆ ಆತನೊಂದಿಗೆ ಫೋನ್ನಲ್ಲಿ ಮಾತನಾಡಿದ್ದರು. ಆದರೆ ಅಕ್ಟೋಬರ್ 14 ರಂದು ಆತನನ್ನು ಗಲ್ಲಿಗೇರಿಸಲಾಗಿದೆ ಎಂಬ ಆಘಾತಕಾರಿ ಸುದ್ದಿ ಬಂದಿದೆ. ಈ ಸುದ್ದಿ ಕೇಳಿ ಆತನ 65 ವರ್ಷದ ಅತ್ತೆ ಆಬೇದಾ ಬೇಗಂ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದು ಮೃತಪಟ್ಟಿದ್ದಾರೆ!
ನಜ್ರುಲ್ ತಂದೆ ಅಬ್ದುಲ್ ಬಸೀರ್ ಮಾತನಾಡಿ, “ನನ್ನ ಮಗನಿಗೆ ಸೌದಿಯಲ್ಲಿ ನ್ಯಾಯಸಮ್ಮತ ವಿಚಾರಣೆಯೇ ಸಿಗಲಿಲ್ಲ. ಆತ ಅತ್ಯಂತ ಸಜ್ಜನನಾಗಿದ್ದ. ಸೌದಿಯ ಪಾಕಿಸ್ತಾನಿ ಸಹೋದ್ಯೋಗಿಯೊಬ್ಬನ ಜೊತೆ ಆತನಿಗೆ ಗಲಾಟೆಯಾಗಿತ್ತು, ಆತನೇ ಸಂಚು ರೂಪಿಸಿ ನನ್ನ ಮಗನನ್ನು ಸಿಲುಕಿಸಿದ್ದಾನೆ” ಎಂದು ಆರೋಪಿಸಿದ್ದಾರೆ. ಇನ್ನು ಕೊಲೆಯಾದ ಮಹಿಳೆ ಸಿಟಿ ಅಖ್ತರ್ ನಜ್ರುಲ್ನ ಹೆಂಡತಿಯಲ್ಲ, ಅವರು ಜೊತೆಗೆ ಕೆಲಸ ಮಾಡುತ್ತಿದ್ದರು ಎಂದು ನಜ್ರುಲ್ ತಂದೆ ತಿಳಿಸಿದ್ದರೆ, ಇಬ್ಬರ ನಡುವೆ ‘ಅಫೇರ್’ ಇತ್ತು ಎಂದು ಸಂಬಂಧಿಕರೊಬ್ಬರು ಹೇಳಿದ್ದಾರೆ.






















