ಆರೋಗ್ಯ

ಸಂಪ್ಯ ದೇವಸ್ಥಾನದಲ್ಲಿ ಆರೋಗ್ಯದ ಪ್ರಸಾದ | ಧನ್ವಂತರಿ ಹವನದೊಂದಿಗೆ ಆರಂಭವಾದ 50ನೇ ಶ್ರೀ ಮಹಾವಿಷ್ಣುಮೂರ್ತಿ ಆರೋಗ್ಯ ಶಿಬಿರ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಶನಿವಾರ ಸಂಜೆ ಶ್ರೀ ಮಹಾವಿಷ್ಣುಮೂರ್ತಿ ದೇವರಿಗೆ ರಂಗಪೂಜೆ, ಭಾನುವಾರ ಬೆಳಿಗ್ಗೆ ಧನ್ವಂತರಿ ಹವನ ನಡೆದು ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನ ವಠಾರದಲ್ಲಿ 50ನೇ ವೈದ್ಯಕೀಯ ಶಿಬಿರ ಆರಂಭಗೊಂಡಿತು.

maithri

ಡಾ. ಸುರೇಶ್ ಪುತ್ತೂರಾಯ ಅವರ ಸಾರಥ್ಯದಲ್ಲಿ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಳದ ವ್ಯವಸ್ಥಾಪನಾ ಸಮಿತಿ, ಊರವರ ಸಹಕಾರದೊಂದಿಗೆ 49 ಶಿಬಿರ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಭಾನುವಾರ ಬೆಳಿಗ್ಗೆ 50ನೇ ಶಿಬಿರ ಉದ್ಘಾಟನೆಗೊಂಡಿತು.

ಸಂಪ್ಯ ಆರೋಗ್ಯ ರಕ್ಷಾ ಸಮಿತಿ, ಸಂಪ್ಯ ರಾಮನಗರ ನವಚೇತನಾ ಯುವಕ ಮಂಡಲ, ಮುಕ್ರಂಪಾಡಿ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಪುತ್ತೂರು ಐಕ್ಯ ಕಲಾ ಸೇವಾ ಟ್ರಸ್ಟ್ ಸಹಕಾರದೊಂದಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ.

ಭಾನುವಾರ ಬೆಳಿಗ್ಗೆ ಸಂಪ್ಯ ದೇವಸ್ಥಾನದ ಆವರಣ ತುಂಬಾ ಜನಸ್ತೋಮ. ಎಲ್ಲರೂ ಆರೋಗ್ಯದ ಪ್ರಸಾದಕ್ಕಾಗಿ ಕಾದು ಕುಳಿತವರು. ಬಂದವರ ಹೊಟ್ಟೆ ತಣಿಸಿ, ಸಭಾ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ 15 ಕೌಂಟರ್ ಗಳಲ್ಲಿ ವೈದ್ಯರು ಆರೋಗ್ಯ ಸೇವೆ ನೀಡಿದರು.

ಸ್ವಾರ್ಥವೇ ತುಂಬಿದ ಸಮಾಜದಲ್ಲಿ ನಿಸ್ವಾರ್ಥ ಸೇವೆ: ರಾಜಾರಾಮ್ ಶೆಟ್ಟಿ ಕೋಲ್ಪೆಗುತ್ತು

ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ನಿರಂತರ 50 ಕಾರ್ಯಕ್ರಮ ನಡೆಸಿಕೊಂಡು ಬರುವುದು ಸುಲಭದ ಕೆಲಸವಲ್ಲ. ಆರೋಗ್ಯದ ಬಗ್ಗೆ ನಮಗೆ ನಿಗಾ ಬೇಕು. ಸ್ವಾರ್ಥವೇ ತುಂಬಿದ ಸಮಾಜದಲ್ಲಿ ಇಂತಹ ಉತ್ತಮ ಕಾರ್ಯಕ್ರಮವನ್ನು ಡಾ. ಸುರೇಶ್ ಪುತ್ತೂರಾಯ ಅವರ ನೇತೃತ್ವದಲ್ಲಿ  ಸಂಘಟಿಸಿದ್ದೀರಿ. 100ನೇ ಶಿಬಿರವೂ ಯಶಸ್ವಿಯಾಗಿ ನಡೆಯಲಿ ಎಂದು ಶುಭಹಾರೈಸಿದರು.

ಸ್ವಾಸ್ಥ್ಯ ಸಮಾಜಕ್ಕೆ ಪೂರಕ: ವಾಮನ್ ಪೈ

ವೈದ್ಯಕೀಯ ಶಿಬಿರದ ಕೌಂಟರ್ ಉದ್ಘಾಟಿಸಿ ಮಾತನಾಡಿದ ಗಣೇಶ್ ಟ್ರೇಡರ್ಸ್ ಮಾಲಕ ವಾಮನ್ ಪೈ, ವಾಹನ ಖರೀದಿಸಿ ಸರ್ವೀಸ್ ಮಾಡದೇ ಇದ್ದರೆ ಹೇಗೆಯೋ ಹಾಗೆ ದೇಹವೂ ಕೂಡ. ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ನಡೆಸಿ, ಸೂಕ್ತ ಔಷದೋಪಚಾರ ನಡೆಸಿದರೆ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ. ಇದರಿಂದ ಸ್ವಾಸ್ಥ್ಯ ಸಮಾಜ ನಿರ್ಮಾಣ ಆಗುತ್ತದೆ. ಹೀಗೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಆಗಲು ವೈದ್ಯಕೀಯ ಶಿಬಿರ ಪೂರಕ. ಡಾ. ಸುರೇಶ್ ಪುತ್ತೂರಾಯ ಅವರ ನೇತೃತ್ವದಲ್ಲಿ ನಡೆಯುತ್ತಿರುವ ನೂರಾರು ತಿಂಗಳು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.

ಆರೋಗ್ಯ ಕೊರತೆಯಿಂದ ನೈತಿಕ ಪತನ: ಡಾ. ಗಣೇಶ್ ಪ್ರಸಾದ್ ಮುದ್ರಾಜೆ

ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಮಾಹಿತಿ ನೀಡಿದ ಡಾ. ಗಣೇಶ್ ಪ್ರಸಾದ್ ಮುದ್ರಾಜೆ, ಆರೋಗ್ಯ ಎಂದರೆ ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಆರೋಗ್ಯ ಹೊಂದಿರುವುದು. ಇಂದು 20 ಕೋಟಿಗಿಂತಲೂ ಹೆಚ್ವು ಮಂದಿ ಮಾದಕ ವ್ಯಸನದಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ಕಾರಣ ಒತ್ತಡ, ಕುತೂಹಲ, ಸಹಪಾಠಿಗಳ ಸಹವಾಸ, ಅಪಕ್ವತೆ, ಹಾಗೂ ಕೂಡುಕುಟುಂಬಗಳ ವಿಘಟನೆ ಮೊದಲಾದವು ಕಾರಣ. ಎಲ್ಲಿ ಆರೋಗ್ಯ ಸಮಾಜ ಇರುವುದಿಲ್ಲವೋ ಆ ದೇಶ ಶೀಘ್ರವಾಗಿ ನೈತಿಕ ಪತನ ಹೊಂದುತ್ತದೆ. ಆದ್ದರಿಂದ ಇಂತಹ ಸಮಸ್ಯೆಗಳಿಂದ ಬಳಲುವ ವ್ಯಕ್ತಿಗಳಿಗೆ ಗದರುವ ಬದಲು ಸೂಕ್ತ ಚಿಕಿತ್ಸೆ ನೀಡುವ‌ ಪ್ರಯತ್ನ ಮಾಡಬೇಕು ಎಂದರು.

ಶ್ರೀ ಮಹಾವಿಷ್ಣುಮೂರ್ತಿ ಆರೋಗ್ಯ ಶಿಬಿರ: ಡಾ. ಸುರೇಶ್ ಪುತ್ತೂರು

ಅಧ್ಯಕ್ಷತೆ ವಹಿಸಿದ್ದ ಡಾ. ಸುರೇಶ್ ಪುತ್ತೂರಾಯ ಮಾತ‌ನಾಡಿ, ಕೊರೋನಾ ನಂತರ ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆ ಆಯಿತು. ಇದರ ಬಗ್ಗೆ ಚರ್ಚೆ ನಡೆದಾಗ, ನಾನು ವೈದ್ಯ. ಆದ್ದರಿಂದ ಚಿಕಿತ್ಸೆ ನೀಡುವ ಕೆಲಸವನ್ನಷ್ಟೇ ತಾನು ಮಾಡಬಲ್ಲೆ ಅಂದಿದ್ದೆ. ಹಾಗೇ ವೈದ್ಯಕೀಯ ಶಿಬಿರ ಆರಂಭವಾಯಿತು. ಡಾ. ಗೌರಿ‌ ಪೈ ಹಾಗೂ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಆಭಾರಿಯಾಗಿದ್ದೇನೆ ಎಂದ ಅವರು ಇಲ್ಲಿವರೆಗೆ ಮಾಸಿಕ ಶಿಬಿರ ಎಂದು ಕರೆಯುತ್ತಿದ್ದೇವು. ಇನ್ನು ಮುಂದೆ ಶ್ರೀ ಮಹಾವಿಷ್ಣುಮೂರ್ತಿ ಆರೋಗ್ಯ ಶಿಬಿರ ಎಂದು ಕರೆಯುವಂತೆ ವಿನಂತಿಸಿಕೊಂಡರು.

ಸಂಪ್ಯ ನವಚೇತನ‌ ಯುವಕ ಮಂಡಲದಿಂದ ದೇವಸ್ಥಾನಕ್ಕೆ 1 ಲಕ್ಷ ರೂ.ನ ಚೆಕ್ ನೀಡಲಾಯಿತು.

ಅರುಣ್ ಕುಮಾರ್ ಪುತ್ತಿಲ, ಜಯಂತ್ ಶೆಟ್ಟಿ ಕಂಬಳತ್ತಡ್ಡ, ಸಂತೋಷ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಆರೋಗ್ಯ ರಕ್ಷಾ ಸಮಿತಿ ಅಧ್ಯಕ್ಷ ಉದಯ್ ಕುಮಾರ್ ರೈ ಸ್ವಾಗತಿಸಿದರು. ಉಮೇಶ್ ಸಂಪ್ಯ ವಂದಿಸಿದರು. ಹರಿಣಿ ಪುತ್ತೂರಾಯ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts