ಲಕ್ಕೋ : ಉತ್ತರಪ್ರದೇಶದ ಬುಲಂದ್ ಶಹರ್ ನಲ್ಲಿ ಒಂದು ಲೀಟರ್ ರಾಸಾಯನಿಕಗಳನ್ನು ಬಳಸಿ 500 ಲೀಟರ್ ನಕಲಿ ಹಾಲನ್ನು ತಯಾರಿಸುತ್ತಿದ್ದ ಉದ್ಯಮಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
‘ಅಗರ್ವಾಲ್ ಟ್ರೇಡರ್ಸ್’ ಮಾಲಕ ಅಜಯ್ ಅಗರ್ವಾಲ್ ಬಂಧಿತ ಆರೋಪಿ. ‘ಅಗರ್ವಾಲ್ ಟ್ರೇಡರ್ಸ್’ ನಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿತ್ತು. ಅಗರ್ವಾಲ್ ರಾಸಾಯನಿಕಗಳನ್ನು ಬಳಸಿ ಹಾಲನ್ನು ತಯಾರಿಸಿ ಬಳಿಕ ನಿಜವಾದ ಹಾಲಿನಂತೆ ಸಿಹಿಯಾಗಿರಲು ಕೃತಕ ಸಿಹಿಕಾರಕ ಅಂಶಗಳನ್ನು ಬಳಸುತ್ತಿದ್ದ. ಈತ ಕಳೆದ 20 ವರ್ಷಗಳಿಂದ ನಕಲಿ ಹಾಲು ಮತ್ತು ನಕಲಿ ಪನೀರ್ ಮಾರಾಟ ಮಾಡುತ್ತಿದ್ದ ಎಂದು ತನಿಖೆಯ ವೇಳೆ ಬಯಲಾಗಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ(FSSAI) ಅಧಿಕಾರಿಗಳು ಅಗರ್ವಾಲ್ ಅವರ ಅಂಗಡಿ ಮತ್ತು ನಾಲ್ಕು ಗೋದಾಮುಗಳ ಮೇಲೆ ದಾಳಿ ನಡೆಸಿ ರಾಸಾಯನಿಕಗಳನ್ನು ವಶಪಡಿಸಿಕೊಂಡಿದ್ದಾರೆ. ಅಗರ್ವಾಲ್ ತನಿಖೆಯ ವೇಳೆ ನಕಲಿ ಹಾಲನ್ನು ತಯಾರಿಸಲು ಬಳಸಿದ ರಾಸಾಯನಿಕದ ಹೆಸರನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೆ, ಆತ ಕೇವಲ ಐದು ಮಿ.ಲೀ. ರಾಸಾಯನಿಕದಿಂದ ಎರಡು ಲೀಟರ್ ಗಳಷ್ಟು ನಕಲಿ ಹಾಲನ್ನು ತಯಾರಿಸುತ್ತಿದ್ದ ಎಂದು ಹೇಳಿಕೊಂಡಿದ್ದಾನೆ. ಹಾಲಿನ ಬಣ್ಣ, ರುಚಿ, ವಾಸನೆಯಲ್ಲಿ ಕೃತಕ ಹಾಲು ಎಂದು ತಿಳಿಯದಂತೆ ರಾಸಾಯನಿಕಗಳನ್ನು ಬೆರೆಸಿ ಹಾಲನ್ನು ಸಿದ್ದಪಡಿಸುತ್ತಿದ್ದ ಎಂದು ತನಿಖೆಯ ವೇಳೆ ಪತ್ತೆಯಾಗಿದೆ.
ಅಗರ್ವಾಲ್ ತನ್ನ ಹಳ್ಳಿಯಲ್ಲಿ ಇತರ ಹಾಲು ಮಾರಾಟಗಾರರಿಗೂ ಈ ರಾಸಾಯನಿಕ ಬಳಸಿ ಹಾಲನ್ನು ತಯಾರಿಸುವ ಸೂತ್ರವನ್ನು ಹೇಳಿಕೊಟ್ಟಿದ್ದಾನೆ. ಹಾಲಿಗೆ ಕೃತಕ ಸಿಹಿಕಾರಕ ಅಂಶಗಳು ಮತ್ತು ರಾಸಾಯನಿಕಗಳನ್ನು ಬಳಸಲಾಗಿದೆ ದೈನಿಕ್ ಭಾಸ್ಕರ್ ವರದಿಯ ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಎಫ್ಎಸ್ಎಸ್ಎಐ ಅಧಿಕಾರಿ ಸಕ್ಷೇನಾ, ಅಗರ್ ವಾಲ್ ನಕಲಿ ಹಾಲನ್ನು ತಯಾರಿಸುವ ಸೂತ್ರವನ್ನು ಎಲ್ಲಿ ಕಲಿತಿದ್ದಾನೆ ಮತ್ತು ಈತನಿಂದ ನಕಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಯಾರು ಖರೀದಿಸುತ್ತಿದ್ದರು ಎಂಬ ಬಗ್ಗೆ ತನಿಖೆ ನಡೆಯಲಿ ದೆ ಎಂದು ಹೇಳಿದ್ದಾರೆ.