ಧರ್ಮಸ್ಥಳ: ಭಾರತದ ಸಂವಿಧಾನ ರೂಪುಗೊಳ್ಳುವ ಮುನ್ನವೆ ಸರ್ವಧರ್ಮ ಸಮನ್ವಯದ ತತ್ವಗಳು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಿರೂಪಿಸಲ್ಪಟ್ಟವು ಎಂದು ರಾಜ್ಯದ ಗೃಹ ಸಚಿವ ಡಾ.ಜಿ ಪರಮೇಶ್ವರ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಪ್ರಯುಕ್ತ ಶುಕ್ರವಾರ 92 ನೇ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲಾ ಧರ್ಮಗಳು ಭಿನ್ನ ಆಲೋಚನೆಗಳನ್ನು ದಾಟಿಸಿದೆ. ಸೌಹಾರ್ದಯುತ ಮನೋಭಾವನೆಯನ್ನು ಬಿಂಬಿಸಿವೆ. ಇದನ್ನು ಅರ್ಥ ಮಾಡಿಕೊಳ್ಳದೆ ಅನಾವಶ್ಯಕವಾಗಿ ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುವ ಮನಸ್ಥಿತಿ ಇದೆ. ಈ ಮನಸ್ಥಿತಿಯ ಮಿತಿಯಿಂದ ಹೊರಬರುವುದಕ್ಕೆ ಧರ್ಮ ತತ್ವಗಳು ನೆರವಾಗುತ್ತದೆ ಎಂದರು.
ಶ್ರೀ ಕೈಲಾಸ ಆಶ್ರಮ ಮಹಾಸಂಸ್ಥಾನ ರಾಜರಾಜೇಶ್ವರಿ ನಗರ ಬೆಂಗಳೂರಿನ ಶ್ರೀ ಶ್ರೀ ಶ್ರೀ ಜಯೇಂದ್ರ ಪುರಿ ಮಹಾಸ್ವಾಮಿಗಳು ಅಧಿವೇಶನದಲ್ಲಿ ಮಾತನಾಡಿ, ಇಡೀ ವಸುಧೆಯೇ ನಮ್ಮ ಕುಟುಂಬ ಎಂಬ ಭಾವನೆಯನ್ನು ಮಾನವ ಹೊಂದಬೇಕು. ಅನಂತಕಾಲದವರೆಗೂ ಉಳಿಯಬಹುದಾದ ಉನ್ನತ ಆಲೋಚನೆಯಗಳೊಂದಿಗೆ ಬದುಕಬೇಕು ಎಂದರು.
ಯಾವುದೇ ಧರ್ಮವೂ ಮಾನವರನ್ನು ಮಾನವರಿಂದ ದೂರಮಾಡುವ ಕೆಲಸವನ್ನು ಯಾವತ್ತಿಗೂ ಪ್ರೋತ್ಸಾಹಿಸುವುದಿಲ್ಲ. ಎಲ್ಲಾ ಧರ್ಮಗಳು ಒಂದೆ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಇಂತಹ ಚಿಂತನೆಗಳು ಸರ್ವಧರ್ಮ ಸಮ್ಮೇಳನವನ್ನು ಯಶಸ್ವಿಯನ್ನಾಗಿಸುತ್ತವೆ ಎಂದು ನುಡಿದರು.
ಪ್ರತೀ ಧರ್ಮದ ಮೂಲ ಉದ್ದೇಶ ಮನುಕುಲದಲ್ಲಿ ಸಭ್ಯತೆಯನ್ನು ಕಲಿಸುವುದಾಗಿದೆ. ಅಹಿಂಸಾತ್ಮಕ ಜೀವನವನ್ನು ನಡೆಸುವ ಮಾರ್ಗವನ್ನು ತಿಳಿಸುವ ಮೂಲ ಉದ್ದೇಶವನ್ನು ಧರ್ಮಗಳು ಹೊಂದಿದೆ ಎಂದು ಉಪನ್ಯಾಸಕ ಸಂಶೋಧಕರು ಮತ್ತು ಸಂವಹನಕಾರರಾದ ಡಾ. ಜಿ.ಬಿ ಹರೀಶ ಸಮ್ಮೇಳನದ ಉಪನ್ಯಾಸಕರಾಗಿ ಮಾತನಾಡಿದರು.
ದಯವಿಲ್ಲದ ಧರ್ಮವು ಜಗತ್ತಿನಲ್ಲಿ ಇರುವುದಿಲ್ಲ, ಸಕಲರನ್ನು ಸಲಹಲು ದಯೆಯೆ ಮುಖ್ಯವಾಗಿದೆ. ಪ್ರೀತಿ, ಕರುಣೆ, ದಯೆ ಇವುಗಳು ಧರ್ಮದ ಮೂಲ ಉದ್ದೇಶವಾಗಿ ಗುರುತಿಸಿಕೊಳ್ಳುತ್ತದೆ ಎಂದು ಸಮ್ಮೇಳನದ ಉಪನ್ಯಾಸಕಕಾರ ಮಡಂತ್ಯಾರಿನ ನಿವೃತ್ತ ಪ್ರಾಂಶುಪಾಲ ಡಾ.ಜೋಸೆಫ್.ಎನ್.ಎಮ್ ಹೇಳಿದರು.
ಮಾನವನು ಸ್ವ ಧರ್ಮದ ಚೌಕಟ್ಟಿನಲ್ಲಿದ್ದು ಪರಧರ್ಮವನ್ನು ಗೌರವಿಸಬೇಕು ಅದು ಭಾವೈಕ್ಯತೆ ಎಂದು ನುಡಿದು ತತ್ವಪದಗಳಲ್ಲಿ ಜೀವನ ದರ್ಶನ ಎಂಬ ವಿಷಯದ ಕುರಿತ ಉಪನ್ಯಾಸವನ್ನು ರಾಷ್ಟ್ರೀಯ ಬಸವ ಭೂಷಣ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮೆಹತಾಬ ಇಬ್ರಾಹಿಮ್ ಸಾಬ ಕಾಗವಾಡ ಮಾಡಿದರು.
ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಪ್ರಾಸ್ತಾವಿಕ ಮಾತನಾಡುತ್ತಾ ಮಾನವರು ಧರ್ಮದಲ್ಲಿ ವಿಶಾಲ ಅರ್ಥವನ್ನು ಕಾಣುವ ಮನಸ್ಥಿತಿಯನ್ನು ಹೊಂದಿದ್ದರೆ ಧರ್ಮದಲ್ಲಾಗುವ ಸಂಘರ್ಷಗಳನ್ನು ತಪ್ಪಿಸಲು ಸಾಧ್ಯ ಇದರಿಂದಾಗಿ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಬಹುದು ಎಂದು ತಿಳಿಸಿದರು.
ಚತುರ್ದಾನಗಳಲ್ಲಿ ಒಂದಾದ ಔಷಧದಾನದಲ್ಲಿ ವಿಶೇಷವಾಗಿ ಇದೇ ಹೊಸ ವರ್ಷ ಜನವರಿಯಿಂದ ಅಗತ್ಯವಿರುವವರಿಗೆ ಉಚಿತವಾಗಿ ಡಯಾಲಿಸಿಸ್ ಚಿಕಿತ್ಸಾ ಸೇವೆಯನ್ನು ನೀಡುವುದಾಗಿ ತಿಳಿಸಿದರು.
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮುಖ್ಯ ತೀರ್ಪುಗಾರ ಡಾ.ಪ್ರದೀಪ್ ಭಾರದ್ವಾಜ್ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಉದ್ಘಾಟಕರ ಸಮ್ಮಾನ ಪತ್ರವನ್ನು ಕ್ಷೇಮವನ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರದ್ಧಾ ಅಮಿತ್ ಗೌರವ ವಾಚಿಸಿದರು.
ಅಧ್ಯಕ್ಷರ ಸನ್ಮಾನ ಪ್ರಮಾಣ ಪತ್ರವನ್ನು ಉಜಿರೆಯ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸುನಿಲ್ ಪಂಡಿತ್ ವಾಚಿಸಿದರು. ಕಾರ್ಯಕ್ರಮವನ್ನು ಉಜಿರೆಯ ಎಸ್.ಡಿ.ಎಂ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಡಾ.ಶ್ರೀಧರ ಭಟ್ ನಿರ್ವಹಿಸಿದರು. ಉಜಿರೆ ರುಡ್ ಸೆಟ್ ನಿರ್ದೇಶಕ ಅಜಯ್ ವಂದಿಸಿದರು. ಶ್ರೀವಿದ್ಯಾ ಐತಾಳ ಪ್ರಾರ್ಥಿಸಿದರು.
ಹೆಗ್ಗಡೆಯವರಿಗೆ ಇಂಡಿಯಾ ಬುಕ್ ಆಪ್ ರೆಕಾರ್ಡ್ ಪ್ರಮಾಣ ಪತ್ರ ಹಸ್ತಾಂತರ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವವನ್ನು ಪಡೆದ ಮಂಜುಷಾ ವಸ್ತುಸಂಗ್ರಹಾಲಯದ ಮಹತ್ವವನ್ನು ಸಾರುವ ವೀಡಿಯೋ ಪ್ರದರ್ಶಿಸಲಾಯಿತು.
ವಸ್ತುಪ್ರದರ್ಶನದ ಕ್ಯುರೇಟರ್ ಪುಷ್ಪದಂತ ಅವರು ವಸ್ತು ಸಂಗ್ರಹಾಲಯದ ವಿಶೇಷತೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಮಂಜುಷಾ ವಸ್ತುಸಂಗ್ರಹಾಲಯಕ್ಕೆ ದೊರೆತ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಮಾಣ ಪಾತ್ರವನ್ನು ಈ ಸಂದರ್ಭದಲ್ಲಿ ಹೆಗ್ಗಡೆಯವರಿಗೆ ಹಸ್ತಾಂತರಿಸಲಾಯಿತು.